ಶಾಲೆಗಳಲ್ಲಿ ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಶಿಕ್ಷಣ ಇಲಾಖೆ ಸುತ್ತೋಲೆ

Update: 2020-10-30 13:44 GMT

ಬೆಂಗಳೂರು, ಅ.30: ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಕೋವಿಡ್-19ರ ಪ್ರಮಾಣ ಕಾರ್ಯಾಚರಣಾ ವಿಧಾನದ(ಎಸ್‍ಓಪಿ) ಮೂಲಕ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದು, ಸುರಕ್ಷಿತವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈಗಾಗಲೇ ಸುತ್ತೋಲೆ ಹೊರಡಿಸಿರುವಂತೆ ವಿದ್ಯಾಗಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಮುಂದಿನ ಆದೇಶದವರೆಗೂ ನ.2 ರಿಂದ ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳು ಶಾಲೆಯಲ್ಲಿ ಹಾಜರಿದ್ದು(ಯಾವುದೇ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗತಕ್ಕದಲ್ಲ) ಇಲ್ಲಿಯವರೆಗೆ ಜರುಗಿದ ವಿದ್ಯಾಗಮ ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಪ್ರಗತಿಯನ್ನು ವಿಶ್ಲೇಷಣೆ ಮಾಡಿ ವಿದ್ಯಾರ್ಥಿವಾರು ಸಾಧನೆಯನ್ನು ಹಾಗೂ ಕೊರತೆಯನ್ನು ಪಟ್ಟಿ ಮಾಡಲು ಹಾಗೂ ಸರದಿ ವಿಶ್ಲೇಷಣೆ ಅನುಸಾರ ಮುಂದಿನ ಕಲಿಕೆಗೆ ಅವಶ್ಯ ಬೋಧನಾ ಕಲಿಕಾ ಯೋಜನೆ, ಬೋಧನಾ ಕಲಿಕಾ ಸಾಮಗ್ರಿ ತಯಾರಿಕೆ ಮುಂತಾದ ಕಾರ್ಯಗಳನ್ನು ಕೈಗೊಳ್ಳಲು ತಿಳಿಸಲಾಗಿದೆ.

ಪ್ರಸ್ತುತ ಡಿ.ಎಸ್.ಇ.ಆರ್.ಟಿ ಯೂಟ್ಯೂಬ್ ಚಾನಲ್ ‘ಜ್ಞಾನದೀಪ’ದಲ್ಲಿ ಅಳವಡಿಸಿರುವ ವಿಡಿಯೋಗಳನ್ನು ಹಾಗೂ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳನ್ನು ಮತ್ತು ದೀಕ್ಷಾ ಪೋರ್ಟಲ್‍ನಲ್ಲಿ ಅಳವಡಿಸಿರುವ ಸಾಮಗ್ರಿಗಳನ್ನು ಬಳಸಲು ಮಕ್ಕಳಿಗೆ ಅಗತ್ಯ ಮಾರ್ಗದರ್ಶನಗಳನ್ನು ದೂರವಾಣಿ/ಸಮೂಹ ಮಾಧ್ಯಮದ ಮೂಲಕ ನೀಡುವುದು. ಇಲಾಖೆಯಿಂದ ಮುಂದಿನ ದಿನಗಳಲ್ಲಿ ಟಿ.ವಿ.ಮಾಧ್ಯಮ/ಆಕಾಶವಾಣಿ ಮೂಲಕ ಇನ್ನೂ ಹೆಚ್ಚಿನ ಕಲಿಕೆಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಉದ್ದೇಶಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News