ನ.1ರಂದು ಎಂಇಎಸ್‍ ನಿಂದ ಕರಾಳ ದಿನಾಚರಣೆ: ಬೆಂಬಲಕ್ಕೆ ನಿಂತ ಮಹಾರಾಷ್ಟ್ರ ಸರಕಾರ

Update: 2020-10-30 15:11 GMT
ಏಕನಾಥ ಶಿಂಧೆ

ಬೆಳಗಾವಿ, ಅ.30: ಬೆಳಗಾವಿ ಸೇರಿ ಇತರೆ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನ.1ರಂದು ಎಂಇಎಸ್‍ನವರು ಆಯೋಜಿಸಿರುವ ಕರಾಳ ದಿನಾಚರಣೆ ಆಚರಣೆಗೆ ಬೆಂಬಲ ನೀಡುತ್ತೇವೆ ಹಾಗೂ ಮಹಾರಾಷ್ಟ್ರದ ಸಚಿವರೂ ಅದೇ ದಿನ ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಲು ನಿರ್ಧರಿಸಿದ್ದಾರೆ ಎಂಬ ಹೇಳಿಕೆಯನ್ನು ಮುಂಬೈನಲ್ಲಿ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಏಕನಾಥ ಶಿಂಧೆ ಬಿಡುಗಡೆ ಮಾಡಿದ್ದಾರೆ.   

ಮಹಾರಾಷ್ಟ್ರ ರಚನೆಯಾದಾಗ ದಕ್ಷಿಣದ ಹಲವು ಗ್ರಾಮಗಳನ್ನು ಸೇರ್ಪಡಿಸಿಕೊಳ್ಳಲು ಆಗಲಿಲ್ಲ. ಇದಕ್ಕಾಗಿ ಹಲವು ದಶಕಗಳಿಂದ ಹೋರಾಡುತ್ತಿದ್ದೇವೆ. ಶೀಘ್ರದಲ್ಲೇ ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸೇರಿ ಇನ್ನಿತರ ಪ್ರದೇಶಗಳನ್ನು ಮಹಾರಾಷ್ಟಕ್ಕೆ ಸೇರಿಸಿಕೊಳ್ಳುತ್ತೇವೆ ಎಂಬ ಹೇಳಿಕೆ ಇರುವ ಪತ್ರವನ್ನು ಮರಾಠಿ ಭಾಷಿಕರನ್ನು ಉದ್ದೇಶಿಸಿ ಗಡಿ ಉಸ್ತುವಾರಿ ಸಚಿವರಾದ ಏಕನಾಥ ಶಿಂಧೆ ಮತ್ತು ಛಗನ್ ಭುಜಬಲ್ ಅವರು ಪತ್ರ ಬರೆದಿದ್ದಾರೆ. 

ಕ್ರಮಕ್ಕೆ ಒತ್ತಾಯ: ಮಹಾರಾಷ್ಟ್ರ ಸರಕಾರದ ಹೇಳಿಕೆ ಖಂಡಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಸಿಎಂ ಬಿಎಸ್‍ವೈ ಅವರಿಗೆ ಪತ್ರ ಬರೆದಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದವು 2004ರಿಂದಲೂ ಸುಪ್ರೀಂಕೋರ್ಟ್ ಮುಂದಿದೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವರೆಲ್ಲರೂ ಕೈಗೆ ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಲು ನಿರ್ಧರಿಸಿರುವುದು ನಿಂದನೆಯಾಗಿದೆ. ಇದನ್ನು ನಮ್ಮ ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಮ್ಮ ಸರಕಾರ ಆಕ್ಷೇಪ ವ್ಯಕ್ತಪಡಿಸದೆ ಅಥವಾ ಪ್ರತಿಭಟಿಸದೆ ಮೌನ ವಹಿಸಿದರೆ ಕನ್ನಡಿಗರಿಗೆ ತಪ್ಪು ಸಂದೇಶ ರವಾನೆಯಾದಂತೆ ಆಗುತ್ತದೆ. ಹೀಗಾಗಿ, ವಿಷಯದ ಗಂಭೀರತೆ ಅರಿಯಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News