ವಿದ್ಯಾರ್ಥಿ ನಿಲಯದ ನಿವೇಶನ ಕಬಳಿಸಲು ಯತ್ನ: ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಒತ್ತಾಯ

Update: 2020-10-30 15:40 GMT

ಬೆಂಗಳೂರು, ಅ. 30: ಬೆಂಗಳೂರು ನಗರ ಪೂರ್ವ ತಾಲೂಕು ಕೆ.ಆರ್.ಪುರ ವ್ಯಾಪ್ತಿಯ ಬಿದರಹಳ್ಳಿ ಹೋಬಳಿ ಕಾಟನ್ ನಲ್ಲೂರು ಗ್ರಾಮದ ಸರ್ವೆ ನಂ.63ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ(ಎಸ್ಸಿ-ಎಸ್ಟಿ) ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿ ಇದೀಗ ಏಕಾಏಕಿ ಬದಲಿ ನಿವೇಶನ ಕೋರಿರುವುದಕ್ಕೆ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್. ಮಹದೇವಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ದೂರು ನೀಡಿರುವ ಅವರು, ಪರಿಶಿಷ್ಟ ವರ್ಗದ ವಿದ್ಯಾರ್ಥಿ ನಿಲಯಕ್ಕೆ ಯಾವುದೇ ಕಾರಣಕ್ಕೂ ಬದಲಿ ನಿವೇಶನವನ್ನು ಕೇಳದೆ ಉದ್ದೇಶಿಸಿದ್ದ ಜಾಗದಲ್ಲೆ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಮಾಡಬೇಕು. ಎಸ್ಸಿ-ಎಸ್ಟಿ ವರ್ಗದ ವಿದ್ಯಾರ್ಥಿ ನಿಲಯಕ್ಕೆ ಮೀಸಲಿಟ್ಟ ನಿವೇಶನವನ್ನು ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಮತ್ತು ಈ ಸಮುದಾಯಗಳ ಹಿತ ಕಾಯುವುದು ಸರಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ಎಂದು ನಾವುಗಳು ನಂಬಿದ್ದೇವೆ. ಹೀಗಿರುವಾಗ ಲಭ್ಯವಿರುವ ನಿವೇಶನದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಿಸದೆ ಬದಲಿ ನಿವೇಶನವನ್ನು ಕೇಳುತ್ತಿರುವುದು ಸಮುದಾಯಕ್ಕೆ ಮಾಡುವ ವಂಚನೆಯಾಗಿದೆ. ಉದ್ದೇಶಿತ ಸ್ಥಳದಲ್ಲೆ ವಿದ್ಯಾರ್ಥಿ ನಿಲಯ ನಿರ್ಮಿಸದಿದ್ದರೆ ಸಂಘವು ದಲಿತ ಸಂಘಟನೆಗಳೊಂದಿಗೆ ಸೇರಿ ಸರಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಮಹದೇವಸ್ವಾಮಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News