ಸರಕಾರಿ ನೌಕರರು ಸಿನಿಮಾ ನಟನೆ, ಸಾಹಿತ್ಯ, ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ಬಂಧ

Update: 2020-10-30 16:06 GMT

ಬೆಂಗಳೂರು, ಅ. 30: ರಾಜ್ಯ ಸರಕಾರಿ ನೌಕರರು ಪಾಲಿಸಬೇಕಾದ `ಶಿಷ್ಟಾಚಾರ'ಗಳಿಗೆ ಸಂಬಂಧಪಟ್ಟಂತೆ ಜಾರಿಯಲ್ಲಿದ್ದ ನಿಯಮಗಳನ್ನು ಪರಿಷ್ಕರಿಸಿರುವ ರಾಜ್ಯ ಸರಕಾರ `ಕರ್ನಾಟಕ ನಾಗರಿಕ ಸೇವಾ(ನಡತೆ) ನಿಯಮಗಳು-2020'ರ ಕರಡನ್ನು ಪ್ರಕಟಿಸಿದೆ. ಆದರೆ, ಇದಕ್ಕೆ ನೌಕರರ ಸಂಘಟನೆಗಳು ಸೇರಿದಂತೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದು, ಸರಕಾರದಿಂದ ನೌಕರರ `ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ' ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.

ರಾಜ್ಯಪತ್ರ(ಗೆಜೆಟ್)ದಲ್ಲಿ ಕರಡನ್ನು ಪ್ರಕಟಿಸಿದ್ದು, ಹದಿನೈದು ದಿನಗಳಲ್ಲಿ ಕರಡು ನಿಯಮಗಳಿಗೆ ಆಕ್ಷೇಪಣೆ ಆಹ್ವಾನಿಸಲಾಗಿದೆ. ರಾಜ್ಯ ಸರಕಾರಿ ನೌಕರರು ಯಾವುದೇ ರೀತಿಯ ಸಾಹಿತ್ಯಿಕ/ಕಲಾತ್ಮಕ/ ವೈಜ್ಞಾನಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ನೌಕರರು ಸಿನಿಮಾ, ಟಿವಿ ಕಾರ್ಯಕ್ರಮಗಳಲ್ಲಿ ನಟಿಸಲು ನಿಷೇಧ ಹೇರಲಾಗಿದೆ.

ಆದರೆ, ಸಾಂದರ್ಭಿಕವಾಗಿ ಸಾಹಿತ್ಯ, ನಾಟಕ, ಪ್ರಬಂಧಗಳು, ಕವನ, ಸಣ್ಣ ಕಥೆಗಳು, ಕಾದಂಬರಿಗಳನ್ನು ಪೂರ್ವಾನುಮತಿ ಪಡೆಯದೆಯೇ ಬರೆಯಲು ಅವಕಾಶವಿರಲಿದೆ. ಅನುಮತಿ ಪಡೆಯದ ಹೊರತು ಸರಕಾರಿ ಸೇವೆಯಲ್ಲಿರುವ ಯಾವುದೇ ನೌಕರರು ಚಲನಚಿತ್ರ ಮತ್ತು ಟಿವಿ ಧಾರಾವಾಹಿಗಳಲ್ಲಿ ನಟಿಸುವಂತಿಲ್ಲ. ಅಲ್ಲದೆ, ಅದಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನಿರ್ಬಂಧಿಸಲಾಗಿದೆ.

ಸರಕಾರಿ ನೌಕರರು ಅನುಮತಿ ಇಲ್ಲದೆ ಪತ್ರಿಕೆ/ ನಿಯತಕಾಲಿಕಗಳ ಪ್ರಕಟಣೆ, ಸಂಪಾದನೆ, ನಿರ್ವಹಣೆಯಲ್ಲಿ ತೊಡಗುವಂತಿಲ್ಲ. ಅಲ್ಲದೆ, ರೇಡಿಯೋ, ಟೆಲಿವಿಷನ್ ಸೇರಿದಂತೆ ಪ್ರಾಯೋಜಿತ ಮಾಧ್ಯಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ. ಅಲ್ಲದೆ, ನೌಕರರ ಕುಟುಂಬದ ಸದಸ್ಯರು ಸಾಮಾಜಿಕ ಚಟುವಟಿಕೆಗಳನ್ನು ಪಾಲ್ಗೊಳ್ಳುವುದಕ್ಕೂ ನಿಷೇಧ ಹೇರಲಾಗಿದೆ.

ರಾಜ್ಯ ಸರಕಾರ ಸದುದ್ದೇಶದಿಂದ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966ಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದ್ದರೆ ಒಳ್ಳೆಯದು. ಭ್ರಷ್ಟಾಚಾರ ನಿಯಂತ್ರಣ, ನೌಕರ ಎರಡು ಮದುವೆ ಆಗುವುದಕ್ಕೆ ನಿರ್ಬಂಧ, ಲೈಂಗಿಕ ಕಿರುಕುಳ ನೀಡುವುದು ಸೇರಿದಂತೆ ಕೆಲವು ನಿಯಮಗಳು ಅಗತ್ಯ. ಆದರೆ, ಸರಕಾರಿ ನೌಕರ ಎಂಬ ಒಂದೇ ಕಾರಣಕ್ಕೆ ಆತ ಮತ್ತು ಆತನ ಕುಟುಂಬದ ಎಲ್ಲ ಸದಸ್ಯರಿಗೆ ನಿಯಂತ್ರಣ ಸರಿಯಲ್ಲ. ಆ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ನಿಯಂತ್ರಣ ಮಾಡುವುದು ಗುಲಾಮಗಿರಿ ಸಂಕೇತ. ಈ ನಿಯಮಗಳನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವೇ ಇಲ್ಲ'

-ಡಿ.ಶಿವಶಂಕರ್, ಅಧ್ಯಕ್ಷರು

ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News