ಉಪ ಚುನಾವಣೆ: ನ.3ಕ್ಕೆ ಘಟಾನುಘಟಿ ಅಭ್ಯರ್ಥಿಗಳ ಭವಿಷ್ಯ ಬರೆಯಲಿರುವ ಮತದಾರ

Update: 2020-10-30 16:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 30: ರಾಜ್ಯದ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆಗೆ ಆಯೋಗ, ಎರಡೂ ಕ್ಷೇತ್ರಗಳಲ್ಲಿ ಒಟ್ಟು 1,008 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಸಕಲ ಸಿದ್ಧತೆ ಮಾಡಿದೆ.

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಅಗತ್ಯ ಕ್ರಮ ಕೈಗೊಂಡಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಎರಡು ಕ್ಷೇತ್ರದಲ್ಲಿ ತಲಾ ಮೂರು ಪಡೆ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರದಲ್ಲಿ ಒಟ್ಟು 678 ಮತಗಟ್ಟೆಗಳು, ಶಿರಾ ಕ್ಷೇತ್ರದಲ್ಲಿ 330 ಮತಗಟ್ಟೆ ಸೇರಿದಂತೆ ಒಟ್ಟು 1,008 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಬಿಜೆಪಿಯ ಮುನಿರತ್ನ, ರಾಜೇಶ್‍ಗೌಡ, ಕಾಂಗ್ರೆಸ್‍ನ ಕುಸುಮಾ, ಟಿ.ಬಿ.ಜಯಚಂದ್ರ, ಜೆಡಿಎಸ್‍ನ ಕೃಷ್ಣಮೂರ್ತಿ ಹಾಗೂ ಅಮ್ಮಾಜಮ್ಮ ಸೇರಿದಂತೆ ಒಟ್ಟು 31 ಅಭ್ಯರ್ಥಿಗಳು ಅಂತಿಮ ಚುನಾವಣಾ ಕಣದಲ್ಲಿದ್ದು, ತೀವ್ರ ಹಣಾಹಣಿ ಏರ್ಪಟ್ಟಿದೆ.

ರಾಜರಾಜೇಶ್ವರಿ ನಗರದಲ್ಲಿ ಕ್ಷೇತ್ರದಲ್ಲಿ ಒಟ್ಟು 4,62,201 ಮತದಾರರಿದ್ದರೆ, ಶಿರಾ ಕ್ಷೇತ್ರದಲ್ಲಿ ಒಟ್ಟು 2,15,725 ಮತದಾರರಿದ್ದು, ನ.3ರಂದು ಘಟಾನುಘಟಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಬರೆಯಲಿದ್ದಾರೆ. ಮತದಾರರ ಗುರುತಿನ ಚೀಟಿ ಇಲ್ಲದ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರು ಆಯೋಗ ಸೂಚಿಸಿರುವ ಪರ್ಯಾಯ ದಾಖಲೆ ತೋರಿಸಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಇವಿಎಂ-ವಿವಿಪ್ಯಾಟ್: ಶಿರಾ ಕ್ಷೇತ್ರಕ್ಕೆ ಈಗಾಗಲೇ 801 ಬ್ಯಾಲೆಟ್ ಯೂನಿಟ್, 801 ಕಂಟ್ರೋಲ್ ಯೂನಿಟ್ ಮತ್ತು 801 ವಿವಿ ಪ್ಯಾಟ್ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 798 ಬ್ಯಾಲೆಟ್ ಯೂನಿಟ್, 770 ಕಂಟ್ರೋಲ್ ಯೂನಿಟ್, 762 ವಿವಿಪ್ಯಾಟ್‍ಗಳನ್ನು ರವಾನಿಸಲಾಗಿದೆ. ಅದೇ ರೀತಿಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ 3,020 ಬ್ಯಾಲೆಟ್ ಯೂನಿಟ್, 1,458 ಕಂಟ್ರೋಲ್ ಯೂನಿಟ್ ಮತ್ತು 1,450 ವಿವಿಪ್ಯಾಟ್‍ಗಳಿವೆ. ಹೆಚ್ಚುವರಿಯಾಗಿ 1,888 ಬ್ಯಾಲೆಟ್ ಯೂನಿಟ್, 1,424 ಕಂಟ್ರೋಲ್ ಯೂನಿಟ್ ಮತ್ತು 1,431 ವಿವಿಪ್ಯಾಟ್‍ಗಳನ್ನು ಒದಗಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ವಿಕಲಚೇತನರಿಗೆ ವಾಹನ ವ್ಯವಸ್ಥೆ: ಎರಡೂ ಕ್ಷೇತ್ರಗಳಲ್ಲಿನ ವಿಕಲಚೇತನರಿಗೆ ಮತಗಟ್ಟೆ ಆಗಮಿಸಿ ಮತಚಲಾಯಿಸಲು ಅನುಕೂಲ ಆಗುವಂತೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಆರ್.ಆರ್.ನಗರದಲ್ಲಿ 200 ಮತ್ತು ಶಿರಾ ಕ್ಷೇತ್ರದಲ್ಲಿ 224 ವೀಲ್ ಚೇರ್ ವ್ಯವಸ್ಥೆ ಜೊತೆಗೆ ಹೆಚ್ಚುವರಿ ವಾಹನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಚುನಾವಣಾ ಆಯೋಗ ವಿವರ ನೀಡಿದೆ.

ಸಿಬ್ಬಂದಿ ನೇಮಕ: ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ 4,203 ಮತಗಟ್ಟೆ ಸಿಬ್ಬಂದಿ, 300 ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಹಾಗೂ 2623 ಮಂದಿ ಪೊಲೀಸ್ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಅದೇ ರೀತಿಯಲ್ಲಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3,857 ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನೇಮಿಸಲಾಗಿದೆ ಎಂದು ಆಯೋಗ ತಿಳಿಸಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹಕ್ಕು ಚಲಾಯಿಸುವ ಮತದಾರರಿಗೆ ಎಡಗೈನ ಮಧ್ಯದ ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುವುದು' ಎಂದು ಚುನಾವಣಾ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News