ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ: ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟ ಸಮಿತಿ ಮನವಿ

Update: 2020-10-30 16:50 GMT

ಮೈಸೂರು,ಅ.30: ರೈತ, ಕಾರ್ಮಿಕ ವಿರೋಧಿ ಮಸೂದೆಗಳನ್ನು ಜಾರಿಗೆ ತಂದು ಅವರ ಬದುಕನ್ನು ಸರ್ವನಾಶ ಮಾಡಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ನಿರಂತರ ಹೋರಾಟವನ್ನು ನಡೆಸುತ್ತಿದ್ದು, ನ.3 ರಂದು ನಡೆಯುವ ರಾಜರಾಜೇಶ್ವರಿನಗರ ಮತ್ತು ಶಿರಾ ಉಪ-ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಿ ಎಂದು ಮತದಾರರಲ್ಲಿ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ಸಮಿತಿ ಕರೆ ನೀಡಿದೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ಬಿಜೆಪಿ ಪಕ್ಷನ್ನು ಸೋಲಿಸುವಂತೆ ನಾವು ಮತದಾರರಲ್ಲಿ ಮನವಿ ಮಾಡಿದ್ದು, ನಮ್ಮ ರೈತ ಮುಖಂಡರುಗಳು ಮತ್ತು ಕಾರ್ಯಕರ್ತರು ಮನೆ, ಮನೆಗೆ ಹೋಗಿ ಬಿಜೆಪಿ ಸರ್ಕಾರದ ರೈತ ವಿರೋಧಿ ನಿಲುವುಗಳನ್ನು ತಿಳಿಸಿಕೊಡುತ್ತಿದೆ. ಈಗಾಗಲೇ ಶಿರಾದಲ್ಲಿ ಸಭೆ ನಡೆಸಿ ಕರಪತ್ರಗಳನ್ನು ಬಿಡುಗಡೆ ಮಾಡಿ ಮತದಾರರನ್ನು ಭೇಟಿಯಾಗಿ ವಿನಂತಿ ಮಾಡಲಾಗಿದೆ. ನಮ್ಮ ಕಾರ್ಯಕರ್ತರು ಪ್ರತಿ ಹಳ್ಳಿಗಳಿಗೂ ಹೋಗಿ ರೈತ ವಿರೋಧಿ ಮಸೂದೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೆಳಿದರು.

ನಾಳೆ ರಾಜರಾಜೇಶ್ವರಿ ನಗರದಲ್ಲಿ ಕ್ಯಾಂಪೇನ್: ರಾಜರಾಜೇಶ್ವರಿ ನಗರದಲ್ಲಿ ಅ.31 ರಂದು ಐಕ್ಯ ಹೋರಾಟ ಸಮಿತಿ ವತಿಯಿಂದ ಕ್ಯಾಂಪೇನ್ ಹಮ್ಮಿಕೊಳ್ಳಲಾಗಿದ್ದು, ಅಂದು ಕಾರ್ಯಕ್ರಮಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಚಾಲನೆ ನೀಡಲಿದ್ದಾರೆ. ಕಾರ್ಮಿಕ ಮುಖಂಡ ಮೈಕಲ್ ಫರ್ನಾಂಡಿಸ್, ಸಮಾಜವಾದಿ ಸಮಾಗಮ ಬಿ.ಆರ್.ಪಾಟೀಲ್, ಸಾಹಿತಿ ಪ್ರೊ.ಎನ್.ಜಿ.ಸಿದ್ದರಾಮಯ್ಯ, ಲೇಖಕಿ ಬಿ.ಟಿ.ಲಲಿತನಾಯಕ್, ಬಾಪು ಹೆದ್ದೂರಶೆಟ್ಟಿ, ಪತ್ರಕರ್ತರ ಇಂಧೂದರ ಹೊನ್ನಾಪುರ, ಚಲನಚಿತ್ರ ನಟ ಚೇತನ್, ಜನಪರ ಸಾಹಿತಿ ಕಲಾವಿದರು ಮತ್ತು ರೈತ ದಲಿತ ಕಾರ್ಮಿಕ ಸಂಘಟನೆಯ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈಗಾಗಲೇ ಎರಡು ಕ್ಷೇತ್ರಗಳಲ್ಲಿ ಐಕ್ಯ ಸಮಿತಿಯಿಂದ ಸಾಮಾಜಿಕ ಜಾಲತಾಣದ ತಂಡ ಸಕ್ರಿಯವಾಗಿ ಕೆಲಸ ಮಡುತ್ತಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ ಮಸೂದೆಗಳು ಮತ್ತು ಜನವಿರೋಧಿ ನೀತಿಗಳನ್ನು ಲಕ್ಷಾಂತರ ಮತದಾರರಿಗೆ ತಿಳಿಸಿ ಬಿಜೆಪಿ ವಿರುದ್ಧ ಮತ ಚಲಾಯಿಸಿ ಉಪ-ಚುನಾವಣೆಯಲ್ಲಿ ಸೋಲಸಿ ಎಂಬ ಎಚ್ಚರಿಕೆ ನೀಡಿ ರೈತರ ಧ್ವನಿಯಾಗಿ ಎಂದು ಮನವಿ ಮಾಡಲಾಗುತ್ತಿದೆ ಎಂದು ಹೇಳಿದರು.

ನಮಗೆ ಎಲ್ಲಾ ರಾಜಕೀಯ ಪಕ್ಷಗಳು ವಿರೋಧಿಗಳೇ ಹೊರತು ಬಿಜೆಪಿ ಮಾತ್ರ ಅಲ್ಲ, ನಾವು ರೈತ ವಿರೋಧಿ ನೀತಿ ಅನುಸರಿಸುವ ಯಾವುದೇ ಪಕ್ಷಗಳನ್ನು ವಹಿಸಿಕೊಳ್ಳುವುದಿಲ್ಲ, ಈಗಿನ ಸ್ಥಿತಿಗತಿ ನೋಡಿದರೆ ಬಿಜೆಪಿ ರೈತರಿಗೆ ಮಾರಕವಾಗುವಂತ ನಿಲುಗಳನ್ನು ಪ್ರಕಟಿಸಿದೆ. ಹಾಗಾಗಿ ಬಿಜೆಪಿಯನ್ನು ಸೋಲಿಸಿ ಎಂದು ಮನವಿ ಮಾಡುತ್ತಿದೇವೆ. ಮತದಾರರು ಬಿಜೆಪಿ ಪಕ್ಷ ಬಿಟ್ಟು ಬೇರೆ ಯಾವ ಪಕ್ಷವನ್ನಾದರೂ ಗೆಲ್ಲಿಸಲಿ ಎಂದು ಹೇಳಿದರು.

ಮುನಿರತ್ನ ಗೂಂಡಾಗಿರಿ ಮಾಡುತ್ತಿದ್ದಾರೆ: ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಬಡಗಲಪುರ ನಾಗೇಂದ್ರ ಆರೋಪಿಸಿದರು.

ಮುನಿರತ್ನ ಈ ಹಿಂದೆ ಕಾಂಗ್ರೆಸ್‍ನಲ್ಲಿದ್ದಾಗಲೂ ಗೂಂಡಾಗಿರಿ ಮೂಲಕ ಗೆಲುವು ಸಾಧಿಸಿದ್ದಾರೆ. ಈ ಬಾರಿಯೂ ಗೂಂಡಾಗಿರಿ ಮಾಡುತ್ತಿದ್ದಾರೆ. ಯಾಕೆಂದರೆ ನಾವು ಒಂದು ಸರ್ಕಲ್‍ನಲ್ಲಿ ಬಿಜೆಪಿ ವಿರುದ್ಧ ಕಾರ್ಯಕ್ರಮ ಹಮ್ಮಿಕೊಳ್ಳಲು ಹೋದಾಗ ಪೊಲೀಸರು ಅವಕಾಶ ನೀಡಲಿಲ್ಲ, ಇಲ್ಲಿ ಬೇಡ ಸರ್, ಬಿಜೆಪಿಯವರು ಗಲಾಟೆ ಮಾಡುತ್ತಾರೆ ಎಂದರು. ಇದರರ್ಥ ಮುನಿರತ್ನ ಗೂಂಡಾಗಿರಿ ಮಾಡುತ್ತಾರೆ ಎಂದು ಹೇಳಿದರು.

ನ.26 ಮತ್ತು 27 ರಂದು ದೆಹಲಿ ಚಲೋ: ಕೇಂದ್ರ ಸರ್ಕಾರ ರೂಪಿಸಿರು ಮಸೂದೆಗಳನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ನವೆಂಬರ್ 26 ಮತ್ತು 27 ರಂದು ಲಕ್ಷಾಂತರ ಸಂಖ್ಯೆಯಲ್ಲಿ ರೈತರು ದೆಹಲಿ ಚಲೋ ನಡೆಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ನ.5 ರಂದು ಹೆದ್ದಾರಿ ತಡೆ: ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮತಿಯು ನವೆಂಬರ್ 5 ರಂದು ದೇಶಾದ್ಯಂತ ಜನವಿರೋಧಿ ಮಸೂದೆಗಳನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವಂತೆ ಕರೆ ನೀಡಲಾಗಿದೆ.

ರಾಜ್ಯ ಸರ್ಕಾರ ಸುಗ್ರೀವಾಜ್ಞೆಗಳನ್ನು ಕೈಬಿಡಲಿ: ಎಪಿಎಂಸಿ ಮತ್ತು ಭೂ-ಸುಧಾರಣೆ ಕಾಯ್ದೆ ಹಾಗೂ ಔದ್ಯೋಗಿಕ ವಿವಾದ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆಗಳ ಅವಧಿ ನವೆಂಬರ್  3ಕ್ಕೆ ಮುಗಿಯಲಿದ್ದು ರಾಜ್ಯ ಸರ್ಕಾರ ಮತ್ತೆ ಸುಗ್ರೀವಾಜ್ಞೆ ತರುವ ಆಲೋಚನೆಯಿಂದ ಹಿಂದೆ ಸರಿಯಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯಕ್ಕೆ 1 ಲಕ್ಷ ಕೋಟಿ ರೂ. ಪ್ಯಾಕೇಜ್ ಕೇಂದ್ರ ನೀಡಲಿ:  ರಾಜ್ಯ ಸತತ 6 ವರ್ಷಗಳ ಕಾಲ ಬರಗಾಲ ಎದುರಿಸಿದೆ. 2 ವರ್ಷಗಳ ಕಾಲ ಪ್ರವಾಹಕ್ಕೆ  ಒಳಗಾಗಿದೆ. ಅತೀ ಮಳೆಯಿಂದ ಕೊಡಗಿನಲ್ಲಿ ಬೆಟ್ಟ ಗುಡ್ಡಗಳು ಕುಸಿದಿವೆ. ಕೆಂದ್ರ ಸರ್ಕಾರ ಕರ್ನಾಟಕಕ್ಕೆ ಒಂದು ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಹೊಸಕೋಟೆ ಬಸವರಾಜು, ಸ್ವರಾಜ್ ಇಂಡಿಯಾದ ಪುನೀತ್, ಪಿ.ಮರಂಕಯ್ಯ, ನೇತ್ರಾವತಿ, ಶೆಟ್ಟಹಳ್ಳಿ ಚಂದ್ರೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News