ಕೋವಿಡ್ ಹೊಡೆತದಿಂದ ತತ್ತರಿಸಿದ್ದ ನಾಗರಿಕ ವಿಮಾನಯಾನ ಚೇತರಿಕೆ

Update: 2020-10-30 16:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.30: ಕೋವಿಡ್-19 ಸೋಂಕಿನ ಹೊಡೆತದಿಂದ ತತ್ತರಿಸಿದ್ದ ನಾಗರಿಕ ವಿಮಾನಯಾನ ವಲಯ ಚೇತರಿಕೆ ಹಾದಿ ಹಿಡಿದಿದ್ದು, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸೆಪ್ಟೆಂಬರ್ ತಿಂಗಳಲ್ಲಿ 8.55 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ ಬೆಳೆಸಿದ್ದಾರೆ. ದೇಶೀಯ ಮಾರ್ಗದಲ್ಲಿ ಆಗಸ್ಟ್ ತಿಂಗಳಲ್ಲಿ 6.52 ಲಕ್ಷ ಜನ ಪ್ರಯಾಣಿಸಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ 8.26 ಲಕ್ಷ ಜನ ಪ್ರಯಾಣಿಸಿದ್ದಾರೆ. ಅಂತರ್‍ರಾಷ್ಟ್ರೀಯ ಮಾರ್ಗದಲ್ಲಿ 2020ರ ಆಗಸ್ಟ್ ನಲ್ಲಿ 25,215 ಜನ ಪ್ರಯಾಣಿಸಿದ್ದು, ಸೆಪ್ಟೆಂಬರ್ ನಲ್ಲಿ 29,510 ಮಂದಿ ಪ್ರಯಾಣಿಸಿದ್ದಾರೆ. ಪ್ರಯಾಣಿಕರ ಸಂಖ್ಯೆಯಲ್ಲಿನ ಪ್ರಗತಿ ತೀವ್ರ ಸಂಕಷ್ಟದಲ್ಲಿದ್ದ ವಿಮಾನಯಾನ ಕಂಪನಿಗಳು ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದೆ.

ಲಾಕ್‍ಡೌನ್ ಸಡಿಲಿಕೆ ನಂತರ ವಹಿವಾಟು ನಿಧಾನವಾಗಿ ಸಹಜ ಸ್ಥಿತಿಗೆ ಬರುತ್ತಿದೆ. ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಕಾರಣ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಯಾಣಿಕರ ಸಂಖ್ಯೆ ಬಹಳ ಕಡಿಮೆಯೇ. ಆದರೆ, ಕೋವಿಡ್ ಲಾಕ್‍ಡೌನ್ ಕಾರಣ ಸಂಪೂರ್ಣ ಬಂದ್ ಆಗಿದ್ದ ವಿಮಾನಯಾನ ಕ್ಷೇತ್ರದ ಬೆಳವಣಿಗೆ ಆಶಾದಾಯಕವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಕ್‍ಡೌನ್ ನಂತರದ ತಿಂಗಳಲ್ಲಿ ವಿಮಾನ ಹಾರಾಟ ಪ್ರಮಾಣ ಶೇ.30ರಷ್ಟಿದೆ.

ಹೀಗಾಗಿ, ಇನ್ನು ಸಾಕಷ್ಟು ಸುಧಾರಣೆ ಕಾಣಬೇಕಿದೆ. ವಾಣಿಜ್ಯ ವಹಿವಾಟು, ಇತರ ಚಟುವಟಿಕೆಗಳು ಮೊದಲಿನಂತೆ ಆರಂಭವಾದರೆ ವಿಮಾನ ಹಾರಾಟ ಹೆಚ್ಚಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ ಅಂತರ್‍ರಾಷ್ಟ್ರೀಯ ಮಾರ್ಗದಲ್ಲಿ 948 ವಿಮಾನಗಳು ಹಾರಾಟ ನಡೆಸಿವೆ. ದೇಶೀಯ ಮಾರ್ಗದಲ್ಲಿ 8,805 ವಿಮಾನಗಳು ಹಾರಾಡಿವೆ. ಅಂತಾರಾಷ್ಟ್ರೀಯ ಮಾರ್ಗದಲ್ಲಿ 29,510 ಮಂದಿ ಹಾಗೂ ದೇಶೀಯ ಮಾರ್ಗದಲ್ಲಿ 8,26,291 ಜನ ಪ್ರಯಾಣಿಸಿದ್ದಾರೆ. ದೇಶ-ವಿದೇಶಗಳ ನಗರಗಳ ನಡುವೆ ಬೆಂಗಳೂರಿನಿಂದ 32,458 ಮೆಟ್ರಿಕ್ ಟನ್ ಕಾರ್ಗೋ ಸಾಗಣೆಯಾಗಿದೆ. ಕಾರ್ಗೋದಲ್ಲಿ ಮಾತ್ರ ಸ್ವಲ್ಪ ಧನಾತ್ಮಕ ಬೆಳವಣಿಗೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News