‘ಇಂಡಿಯನ್ ಆಯಿಲ್‍ನಿಂದ ದೇಶಾದ್ಯಂತ ಸಿಲಿಂಡರ್ ಬುಕಿಂಗ್‍ಗೆ ಒಂದೇ ಸಂಖ್ಯೆ’

Update: 2020-10-30 17:00 GMT

ಬೆಂಗಳೂರು, ಅ.30: ದೇಶದಲ್ಲಿ ನಡೆಯುತ್ತಿರುವ ಹಬ್ಬ ಪರ್ವದಲ್ಲಿ, ಇಂಡಿಯನ್ ಆಯಿಲ್ ಗ್ರಾಹಕರ ಅನುಕೂಲಕ್ಕಾಗಿ ಮತ್ತೊಂದು ಉಪಕ್ರಮ ಆರಂಭಿಸಿದೆ. ದೇಶಾದ್ಯಂತ ಇಂಡೇನ್ ಎಲ್‍ಪಿಜಿ ಮರುಪೂರಣದ ಸಿಲಿಂಡರ್ ಬುಕಿಂಗ್‍ಗಾಗಿ ‘7718955555’ ಒಂದೇ ಸಂಖ್ಯೆಯ ಸೇವೆಯನ್ನು ಪ್ರಾರಂಭಿಸಿದ್ದು, ದಿನದ 24/7 ಲಭ್ಯವಿರುತ್ತದೆ ಎಂದು ಇಂಡಿಯನ್ ಆಯಿಲ್‍ನ ಸಾಂಸ್ಥಿಕ ಸಂವಹನ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಸಾಧನಾ ಖೇರ್ ಮಿತ್ತಲ್ ತಿಳಿಸಿದ್ದಾರೆ.

ಎಲ್.ಪಿ.ಜಿ. ಬುಕ್ಕಿಂಗ್ ಅನ್ನು ಒಂದೇ ಸಂಖ್ಯೆಯಲ್ಲಿ ಎಸ್.ಎಂ.ಎಸ್ ಮತ್ತು ಐವಿಆರ್‍ಎಸ್ ಮೂಲಕ ಮಾಡಬಹುದಾಗಿದ್ದು, ಇದು ಇಂಡೇನ್ ಎಲ್.ಪಿ.ಜಿ. ಮರುಪೂರಣ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಅನುಕೂಲತೆ ಹೆಚ್ಚಿಸುವ ಮಹತ್ವದ ಕ್ರಮವಾಗಿದೆ. ಇದರಿಂದಾಗಿ ಗ್ರಾಹಕರು ಒಂದು ದೂರಸಂಪರ್ಕ ವೃತ್ತದಿಂದ ಮತ್ತೊಂದಕ್ಕೆ ಯಾವುದೇ ರಾಜ್ಯಕ್ಕೆ ಹೋದರೂ, ಅವರ ಇಂಡೇನ್ ಮರುಪೂರಣ ಸಿಲಿಂಡರ್ ಬುಕಿಂಗ್ ಸಂಖ್ಯೆ ಒಂದೇ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ವ್ಯವಸ್ಥೆಯಲ್ಲಿ ಇಂಡೇನ್ ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್‍ನ ದೂರವಾಣಿ ಸಂಖ್ಯೆ ದೂರಸಂಪರ್ಕ ವೃತ್ತ ನಿರ್ದಿಷ್ಟವಾಗಿದ್ದು, ಇದು ಅ.31ರ ಮಧ್ಯರಾತ್ರಿಯಿಂದ ನಿಷ್ಕ್ರಿಯವಾಗಲಿದೆ ಮತ್ತು ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್ ನ ಸಮಾನ ಸಂಖ್ಯೆ ಅಂದರೆ 7718955555 ಜಾರಿಗೆ ಬರುತ್ತದೆ ಎಂದು ಸಾಧನಾ ಖೇರ್ ಮಿತ್ತಲ್ ತಿಳಿಸಿದ್ದಾರೆ.

ಇಂಡೇನ್ ಎಲ್.ಪಿಜಿ. ಸಿಲಿಂಡರ್ ಬುಕ್ಕಿಂಗ್ ಅನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರವೇ ಮಾಡಬಹುದು. ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್‍ನ ಪರಿಷ್ಕೃತ ಪ್ರಕ್ರಿಯೆ ಮತ್ತು ಮೊಬೈಲ್ ಸಂಖ್ಯೆ ನೋಂದಣಿ ಈ ಕೆಳಕಂಡಂತಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಗ್ರಾಹಕರ ದೂರವಾಣಿ ಸಂಖ್ಯೆ ಈಗಾಗಲೇ ಇಂಡೇನ್ ದಾಖಲೆಗಳಲ್ಲಿ ನೋಂದಣಿಯಾಗಿದ್ದರೆ, ಐವಿಆರ್‍ಎಸ್ 16 ಅಂಕಿಗಳ ಗ್ರಾಹಕರ ಐಡಿಯನ್ನು ಕೇಳುತ್ತದೆ. ಈ 16 ಅಂಕಿಗಳ ಗ್ರಾಹಕರ ಐಡಿ ಇಂಡೇನ್ ಎಲ್.ಪಿಜಿ. ಗ್ರಾಹಕರ ಇನ್ ವಾಯ್ಸ್/ನಗದು ಮೆಮೋ/ಚಂದಾ ವೋಚರ್ ನಲ್ಲಿ ನಮೂದಾಗಿರುತ್ತದೆ. ಗ್ರಾಹಕರ ದೃಢೀಕರಣದ ತರುವಾಯ ಮರುಪೂರಣ ಸಿಲಿಂಡರ್ ಬುಕ್ಕಿಂಗ್ ಅಂಗೀಕಾರವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಒಂದೊಮ್ಮೆ ಗ್ರಾಹಕರ ಮೊಬೈಲ್ ಸಂಖ್ಯೆ ಇಂಡೇನ್ ದಾಖಲೆಗಳಲ್ಲಿ ಲಭ್ಯವಿಲ್ಲದಿದ್ದಲ್ಲಿ, ಆಗ ಒಂದು ಬಾರಿಯ ಮೊಬೈಲ್ ನಂಬರ್ ನೋಂದಣಿಯನ್ನು ಗ್ರಾಹಕರು ಸಂಖ್ಯೆ 7ರಿಂದ ಆರಂಭವಾಗುವ ಅವರ 16 ಅಂಕಿಗಳ ಗ್ರಾಹಕರ ಐಡಿಯನ್ನು ಟೈಪ್ ಮಾಡುವ ಮೂಲಕ ಮಾಡಬಹುದಾಗಿದೆ. ಅದೇ ಐವಿಆರ್‍ಎಸ್ ದೃಢೀಕರಣದ ನಂತರ ಇದನ್ನು ಅನುಸರಿಸಬೇಕು. ದೃಢೀಕರಣದ ನಂತರ, ಗ್ರಾಹಕರ ಮೊಬೈಲ್ ಸಂಖ್ಯೆ ನೋಂದಣಿಯಾಗುತ್ತದೆ ಮತ್ತು ಎಲ್ಪಿಜಿ ಮರು ಪೂರಣಬುಕಿಂಗ್ ಅನ್ನು ಸ್ವೀಕರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗ್ರಾಹಕರ ಈ 16-ಅಂಕಿಯ ಗ್ರಾಹಕ ಐಡಿಯನ್ನು ಇಂಡೇನ್ ಎಲ್‍ಪಿಜಿ ಇನ್ವಾಯ್ಸ್, ನಗದು ಮೆಮೋ, ಚಂದಾದಾರಿಕೆ ಚೀಟಿಯಲ್ಲಿ ಉಲ್ಲೇಖಿಸಲಾಗಿರುತ್ತದೆ. ಇಂಡೇನ್ ಎಲ್.ಪಿ.ಜಿ.ಯ ಹೆಚ್ಚಿನ ನವೀಕರಣಗಳಿಗಾಗಿ ಅಂತರ್‍ಜಾಲ ತಾಣ https://cx.indianoil.in ಲಾಗ್ ಇನ್ ಮಾಡಿ ಅಥವಾ ಇಂಡಿಯನ್ ಆಯಿಲ್ ಒನ್ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News