ಬಾಲಕಿಯ ಅತ್ಯಾಚಾರ ಆರೋಪಿಗೆ ಜೀವಾವಧಿ ಶಿಕ್ಷೆ

Update: 2020-10-30 17:58 GMT

ಚಾಮರಾಜನಗರ, ಅ.30: ಪರಿಶಿಷ್ಟ ಜನಾಂಗಕ್ಕೆ ಸೇರಿದ ಬಾಲಕಿಯನ್ನು ಅತ್ಯಾಚಾರವೆಸಗಿದ ವ್ಯಕ್ತಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಸಜೆ, ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಚಾಮರಾಜನಗರ ಪಟ್ಟಣದ ಗಾಳಿಪುರ ಬಡಾವಣೆಯ ಹಾಲಿ ಸರಗೂರಿನಲ್ಲಿ ವಾಸವಾಗಿರುವ ಶಮಿವುಲ್ಲಾ ಅಲಿಯಾಸ್ ಡಾಮ್ಟೆ, ಅಲಿಯಾಸ್ ಸಲ್ಮಾನ್, ಅಲಿಯಾಸ್ ಪ್ರೀತಮ್ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ. ಈತನ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಅಪ್ರಾಪ್ತ ಬಾಲಕಿ ಮೇಲೆ ಎಸಗಿರುವ ಕೃತ್ಯವು ರುಜುವತಾಗಿದೆ ಎಂದು ತೀರ್ಮಾನಿಸಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಸುಲ್ತಾನ್ ಪುರಿ ಅವರು, ಆರೋಪಿಗೆ ಕಲಂ 366 ಐಪಿಸಿ ಅನ್ವಯ 5 ವರ್ಷ ಸಾದಾ ಸಜೆ ಮತ್ತು 50 ಸಾವಿರ ರೂ. ದಂಡ ಮತ್ತು ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಜೆ, ಕಲಂ 376 (ಎನ್) ಐಪಿಸಿ ಅನ್ವಯ 10 ವರ್ಷ ಕಠಿಣ ಸಜೆ ಹಾಗೂ 1 ಲಕ್ಷ ರೂ ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಜೆ ವಿಧಿಸಿದ್ದಾರೆ.

ಅಲ್ಲದೇ ಪೋಕ್ಸೊ ಕಾಯ್ದೆ ಕಲಂ 4ರ ಅನ್ವಯ 7 ವರ್ಷ ಕಠಿಣ ಸಜೆ ಮತ್ತು 1 ಲಕ್ಷ ರೂ. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಜೆ, ಪೋಕ್ಸೊ ಕಾಯ್ದೆ ಕಲಂ 6ರ ಪ್ರಕಾರ 10 ಕಠಿಣ ಸಜೆ ಮತ್ತು 1 ಲಕ್ಷ ರೂ ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಜೆಯನ್ನು ವಿಧಿಸಿದ್ದಾರೆ.

ಅಲ್ಲದೇ ಕಲಂ ಎಸ್ಸಿ, ಎಸ್ಟಿ ಕಾಯ್ದೆ ಅನುಸಾರ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ಮತ್ತು ದಂಡ ತೆರಲು ತಪ್ಪಿದ್ದಲ್ಲಿ 1 ವರ್ಷ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News