ಶಾಸಕರಾಗಿ ಆಯ್ಕೆಯಾದ ಕೂಡಲೇ ಮುನಿರತ್ನಗೆ ಸಚಿವ ಸ್ಥಾನ: ಸಿಎಂ ಯಡಿಯೂರಪ್ಪ

Update: 2020-10-31 13:41 GMT

ಬೆಂಗಳೂರು, ಅ. 31: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಶಾಸಕರಾಗಿ ಆಯ್ಕೆಯಾದ ಕೂಡಲೇ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.

ಶನಿವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ವರ್ಚುಯಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಉಪಚುನಾವಣೆಯಲ್ಲಿ ಯಾವುದೇ ಜಾತಿ ರಾಜಕಾರಣ ನಡೆಯುವುದಿಲ್ಲ. ಎಲ್ಲ ಜಾತಿಯವರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸ ಮಾಡುತ್ತೇವೆ. ಒಕ್ಕಲಿಗ ಸಮುದಾಯದ ಸಚಿವರು ನಮ್ಮ ಸರಕಾರದಲ್ಲಿ ಹೆಚ್ಚಿದ್ದಾರೆ. ಮುನಿರತ್ನ ಕೊರೋನ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಸುಮಾರು 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿಎಸ್‍ವೈ, ಉಪಚುನಾವಣೆ ಮುಗಿದ ಬಳಿಕ ಹೊಸದಿಲ್ಲಿಗೆ ತೆರಳಲಿದ್ದು, ವರಿಷ್ಟರೊಂದಿಗೆ ಸಮಾಲೋಚನೆ ನಡೆಸಲಿದ್ದು, ಅವರು ಒಪ್ಪಿಗೆ ಸೂಚಿಸಿದ ಕೂಡಲೇ ಸಂಪುಟ ವಿಸ್ತರಣೆ ಅಥವಾ ಪುನರಚನೆಯ ಬಗ್ಗೆ ಕ್ರಮ ವಹಿಸಲಿದ್ದೇನೆ. ನೂರಕ್ಕೆ ನೂರು ಶೇಕಡ ಮುನಿರತ್ನ ಸಚಿವರಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರಕಾರದಲ್ಲಿದ್ದ 17 ಶಾಸಕರು ರಾಜೀನಾಮೆ ನೀಡಿ ಆಡಳಿತ ಪಕ್ಷದಿಂದ ಹೊರಬಂದರು. ಕಳೆದ ಉಪಚುನಾವಣೆಯಲ್ಲಿ 13 ಜನ ಗೆದ್ದು ಬಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ. ಇದನ್ನು ನೋಡಿದರೆ ಜನರ ವಿಶ್ವಾಸ ಬಿಜೆಪಿ ಕಡೆಗೆ ಇದೆ ಎನ್ನುವುದು ಸ್ಪಷ್ಟ. ಹೀಗಾಗಿ ಮುನಿರತ್ನ ಅವರ ಗೆಲವು ನಿಶ್ಚಿತ ಎಂದು ಯಡಿಯೂರಪ್ಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News