ವಕ್ಫ್ ಹಗರಣದಲ್ಲಿ ವಂಚಕರಿಗೆ ನೆರವಾದ ಆರೋಪ: ಅನ್ವರ್ ಮಾಣಿಪ್ಪಾಡಿ ಬಂಧನಕ್ಕೆ ಆಗ್ರಹ

Update: 2020-10-31 12:40 GMT
ಅನ್ವರ್ ಮಾಣಿಪ್ಪಾಡಿ 

ಬೆಂಗಳೂರು, ಅ.31: ವಕ್ಫ್ ಹಗರಣ ಸಂಬಂಧ ವಂಚಕರಿಗೆ ನೆರವಾದ ಆರೋಪದಡಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅನ್ನು ಈ ಕೂಡಲೇ ಬಂಧಿಸುವಂತೆ ಸಾಮಾಜಿಕ ಹೋರಾಟಗಾರ ಎ.ಅಲಂ ಪಾಶಾ ಆಗ್ರಹಿಸಿದರು.

ಶನಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಕ್ಫ್ ಭೂ ಕಬಳಿಕೆ ಅಪರಾಧ ಎಂದೂ ತಿಳಿದೂ ನಿಯುಕ್ತ ತನಿಖಾಧಿಕಾರಿಗಳಿಗೆ ಕ್ರಿಮಿನಲ್ ದೂರು ದಾಖಲಿಸದೆ, ಭೂ ವಂಚಕರಿಗೆ ಅನ್ವರ್ ಮಾಣಿಪ್ಪಾಡಿ ನೆರವಾಗಿದ್ದಾರೆ ಎಂದು ಆರೋಪಿಸಿದರು.

ಪ್ರಭಾವಿಗಳು ವಕ್ಫ್ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂದು ಅನ್ವರ್ ಮಾಣಿಪ್ಪಾಡಿ ಹೇಳುತ್ತಾರೆ. ಆದರೆ, ಇದುವರೆಗೂ ಏಕೆ ಒಬ್ಬರ ಮೇಲೂ ಮೊಕದ್ದಮೆ ಹೂಡಿಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು, ವಕ್ಫ್ ಕಬಳಿಕೆ ಆಗಿರುವ ಭೂಮಿಯನ್ನು ವಶಕ್ಕೆ ಪಡೆಯುವ ಸಲುವಾಗಿ ವಿಶೇಷ ನ್ಯಾಯಾಲಯ ತ್ವರಿತವಾಗಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ರಾಜ್ಯದ ಮುಸ್ಲಿಮರಿಗೆ ಸೇರಿದ ಭೂಮಿಯನ್ನು ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳು ಕಬಳಿಸಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸರಕಾರಗಳು ಕೂಡ ಈ ಭೂಮಿಯನ್ನು ರಕ್ಷಿಸಲಿಲ್ಲ. ಆಡಳಿತ ನಡೆಸಿದ ಸರಕಾರಗಳು ಉದ್ದೇಶಪೂರ್ವಕವಾಗಿ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011ನ್ನು ಉಪಯೋಗಿಸಿ ಕಳ್ಳತನವನ್ನು ತಡೆಯಲಿಲ್ಲ. ಒಂದೇ ಒಂದು ಮೊಕದ್ದಮೆ ದಾಖಲಿಸಲಿಲ್ಲ ಎಂದು ಅವರು ಹೇಳಿದರು.

ವಕ್ಫ್ ಆಸ್ತಿ ಕಬಳಿಕೆ ಹಗರಣದಲ್ಲಿ 2 ಲಕ್ಷ ಕೋಟಿ ರೂ. ವಂಚನೆ ನಡೆದರೆ, ಇನ್ನೊಂದೆಡೆ ಪ್ರಭಾವಶಾಲಿ ರಾಜಕಾರಣಿಗಳ ಕೃಪಾಕಟಾಕ್ಷದಲ್ಲಿ 4000 ಕೋಟಿ ರೂ. ವಂಚನೆಯ ಐಎಂಎ ಹಗರಣ ನಡೆದಿದೆ. ಹಾಗಾಗಿ, ಐಎಂಎ ಹಗರಣ ಸಂಬಂಧಿಸಿದಂತೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News