ಸಿಎಂ ಯಡಿಯೂರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚು.ಆಯೋಗಕ್ಕೆ ಕಾಂಗ್ರೆಸ್ ದೂರು

Update: 2020-10-31 13:55 GMT

ಬೆಂಗಳೂರು, ಅ. 31: `ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಿ ಆರು ತಿಂಗಳಲ್ಲಿ ಕೆರೆ ತುಂಬಿಸುವೆ, ದೇವಸ್ಥಾನಕ್ಕೆ ಹಣ ಬಿಡುಗಡೆ, ವಸತಿ ಯೋಜನೆಯಡಿ ಪ್ರತಿ ಮನೆಗೆ 5 ಲಕ್ಷ ರೂ.ನೆರವು ಹಾಗೂ ಕುಂಚಿಗ ಸಮುದಾಯವನ್ನು ಪ್ರವರ್ಗ 2 `ಬಿ' ಅಡಿ ಮೀಸಲಾತಿ ಕಲ್ಪಿಸುವ ಆಶಾವಸನೆ ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಕೋರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದ ಕಾಂಗ್ರೆಸ್ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಶನಿವಾರ ಆಯೋಗಕ್ಕೆ ದೂರು ನೀಡಿದ ಬಳಿಕ ಮಾತನಾಡಿದ ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ, ಮುಖ್ಯಮಂತ್ರಿ ಯಡಿಯೂರಪ್ಪ ಶಿರಾ ಕ್ಷೇತ್ರದ ಜನರಿಗೆ ಮೇಲ್ಕಂಡ ಆಶ್ವಾಸನೆಗಳನ್ನು ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದು, ಅವರ ವಿರುದ್ಧ ಆಯೋಗ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಮದಲೂರು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಡಿಸಿಎಂ ಗೋವಿಂದ ಕಾರಜೋಳ, ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ವಿರುದ್ಧವೂ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಅದೇ ರೀತಿಯಲ್ಲಿ ರಾಜರಾಜೇಶ್ವರಿ ನಗರ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮನೆ ಮನೆಗೆ ಸ್ಟಿಕರ್ ಅಂಟಿಸಿದ್ದು, ಅದರ ವೆಚ್ಚವನ್ನು ಅಭ್ಯರ್ಥಿ ವೆಚ್ಚದೊಂದಿಗೆ ಸೇರಿಸಿಬೇಕು. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್.ಅಶೋಕ್ ಸಹಿತ ಸಚಿವರಾದ ಗೋಪಾಲಯ್ಯ, ಸೋಮಶೇಖರ್ ಮತ್ತು ನಾರಾಯಣಗೌಡ ಜಂಟಿ ಸುದ್ಧಿಗೋಷ್ಟಿ ನಡೆಸಿ `ಕಾಲಬೈರವ ಬೆಟ್ಟ ಒಡೆದು ಏಸು ಬೆಟ್ಟ ಮಾಡಿದ್ದಾರೆ' ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಚಿವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News