ಮಹಾ ಕಾವ್ಯಗಳನ್ನು ಬರೆದವರು ಶೂದ್ರರೇ ಹೊರತು ಮೇಲ್ಜಾತಿಯವರಲ್ಲ: ಸಿದ್ದರಾಮಯ್ಯ

Update: 2020-10-31 14:20 GMT

ಬೆಂಗಳೂರು, ಅ. 31: ದೇಶಕ್ಕಾಗಿ ಬಿಜೆಪಿಯ ಯಾರೊಬ್ಬರೂ ಪ್ರಾಣ ತ್ಯಾಗ ಮಾಡಿಲ್ಲ. ಆದರೂ ನಾವು ದೇಶಭಕ್ತರು ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಬಿಜೆಪಿಯವರೆಲ್ಲ ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದ ಗೂಡ್ಸೆ ವಂಶಸ್ಥರು ಎಂದು ಟೀಕಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸರ್ದಾರ್ ವಲ್ಲಭಭಾಯಿ ಪಟೇಲ ಅವರಿಗೂ ಬಿಜೆಪಿ ಗೂ ಏನೂ ಸಂಬಂಧವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸರ್ದಾರ್ ಪಟೇಲ್ ಅವರು ಕಾಂಗ್ರೆಸಿಗರು. ಆರೆಸ್ಸೆಸ್ ರದ್ದು ಮಾಡಿದವರು ವಲ್ಲಭಭಾಯಿ ಪಟೇಲ್ ಎಂದು ಸ್ಮರಿಸಿದರು.

ಇದೀಗ ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರು ಹೇಳಿಕೊಂಡು ಬಿಜೆಪಿಯವರು ದೇಶಭಕ್ತರಾಗಲು ಹೊರಟಿದ್ದಾರೆ. ಇತಿಹಾಸವನ್ನು ತಿರುಚುವುದಲ್ಲಿ ಬಿಜೆಪಿಯವರು ನಿಸ್ಸೀಮರು. ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಗೆ ನಮ್ಮ ವಿರೋಧವಿಲ್ಲ. ಆದರೆ, ಯಾವುದೇ ವ್ಯಕ್ತಿಯ ಚರಿತ್ರೆ ತಿರುಚುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಾ ಕಾವ್ಯಗಳನ್ನು ಬರೆದವರು ಶೂದ್ರರೇ ಹೊರತು ಮೇಲ್ಜಾತಿಯವರಲ್ಲ. ರಾಮಾಯಣ ಬರೆದವರು ಮಹರ್ಷಿ ವಾಲ್ಮೀಕಿಯವರು. ರಾಮಾಯಣ, ಮಹಾಭಾರತ, ಶಾಂಕುತಲಾ ಕಾವ್ಯ ಬರೆದವರು ಶೂದ್ರ ಸಮುದಾಯಕ್ಕೆ ಸೇರಿದವರು. ಇವುಗಳನ್ನು ಮೇಲ್ಜಾತಿಯವರು ಯಾರೂ ರಚಿಸಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಹುಟ್ಟು ಆಕಸ್ಮಿಕ, ಸಾಧನೆ ಶಾಶ್ವತ ಎಂಬ ಬದುಕಿನ ಬಹುದೊಡ್ಡ ಪಾಠವನ್ನು ರಾಮಾಯಣ ಮಹಾಕಾವ್ಯ ರಚನೆ ಮೂಲಕ ತೋರಿಸಿಕೊಟ್ಟವರು ಮಹಾಗುರು ವಾಲ್ಮೀಕಿ. ನಮ್ಮೆಲ್ಲರ ಬದುಕಿಗೆ ವಾಲ್ಮೀಕಿ ಮಹರ್ಷಿಯ ಸಾಧನೆ ಸ್ಪೂರ್ತಿಯಾಗಲಿ. ನಾಡಬಂಧುಗಳಿಗೆ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು'

-ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News