ಆರ್‌ಆರ್ ನಗರ, ಶಿರಾ ಉಪ ಚುನಾವಣೆ: ಬಹಿರಂಗ ಪ್ರಚಾರಕ್ಕೆ ರವಿವಾರ ತೆರೆ

Update: 2020-10-31 14:22 GMT

ಬೆಂಗಳೂರು, ಅ. 31: ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆಗೆ (ನ.3) ಕ್ಷಣಗಣನೆ ಆರಂಭವಾಗಿದ್ದು, ಬಹಿರಂಗ ಪ್ರಚಾರಕ್ಕೆ ನಾಳೆ(ನ.1) ಸಂಜೆ 6ಗಂಟೆಗೆ ತೆರೆ ಬೀಳಲಿದೆ. ಆ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಮತದಾರರ ಮನವೊಲಿಕೆಗೆ ಸಿಎಂ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಜೆಡಿಎಸ್‍ನ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಘಟಾನುಘಟಿಗಳು ಅಬ್ಬರ ಪ್ರಚಾರ ನಡೆಸಿದರು.

ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ 48 ಗಂಟೆ ಮೊದಲು ಬಹಿರಂಗ ಪ್ರಚಾರ ಮುಕ್ತಾಯಗೊಳ್ಳಲಿದ್ದು, ಮತದಾರರಲ್ಲದ ಹೊರಗಿನ ಯಾವುದೇ ರಾಜಕೀಯ ಪಕ್ಷಗಳು, ಕಾರ್ಯಕರ್ತರು ವಿಧಾನಸಭಾ ಕ್ಷೇತ್ರಗಳನ್ನು ಬಿಡುವಂತೆ ಈಗಾಗಲೇ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಸೋಮವಾರ(ನ.2) ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ಮನೆ ಮನೆ ಪ್ರಚಾರ ನಡೆಸಲಿದ್ದು, ಮತಯಾಚನೆ ಮಾಡಲಿದ್ದಾರೆ.

ಬಹಿರಂಗ ಪ್ರಚಾರದ ಅವಧಿ ಮುಗಿದ ಬಳಿಕ ಯಾವುದೇ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರು ಕ್ಷೇತ್ರದಲ್ಲಿ ಉಳಿದರೆ, ಅಂತಹವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಬಹಿರಂಗ ಪ್ರಚಾರ ಕೈಗೊಂಡರೆ 2 ವರ್ಷಗಳ ಶಿಕ್ಷೆ ಅಥವಾ ದಂಡ ಅಥವಾ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಬಹಿರಂಗ ಚುನಾವಣೆ ಮುಕ್ತಾಯಗೊಂಡ ಬಳಿಕ ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಕ್ಷೇತ್ರದಲ್ಲಿ ಸಂಚಾರ ನಡೆಸಿ ತಪಾಸಣೆ ನಡೆಸಲಿದ್ದಾರೆ ಎಂದು ಎಚ್ಚರಿಸಲಾಗಿದೆ.

ಮನೆ ಮನೆ ಪ್ರಚಾರದ ವೇಳೆ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ. ಮತದಾನ ನಡೆಯುವ 48 ಗಂಟೆ ಮೊದಲು ಕ್ಷೇತ್ರ ಸಂಪೂರ್ಣವಾಗಿ ಶಾಂತಿಯುತ ಮತ್ತು ನಿಶಬ್ದದಿಂದ ಕೂಡಿರಬೇಕು. ಮತದಾರರಿಗೆ ಆಸೆ-ಆಮಿಷವೊಡ್ಡುವಂತಿಲ್ಲ. ಯಾವುದೇ ರೀತಿಯ ಆಶ್ವಾಸನೆಗಳನ್ನು ನೀಡಲು ಅವಕಾಶವಿಲ್ಲ. ಹೀಗಾಗಿ ಯಾವುದೇ ಧ್ವನಿವರ್ಧಕ ಬಳಸುವಂತಿಲ್ಲ. ಒಂದು ವೇಳೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯೋಗ ನಿರ್ದೇಶನ ನೀಡಿದೆ.

ಸಿಎಂ ಪ್ರಚಾರ: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರ ಮುಖ್ಯಮಂತ್ರಿ ಯಡಿಯೂರಪ್ಪ, ಕ್ಷೇತ್ರ ವ್ಯಾಪ್ತಿಯ ಜ್ಞಾನಭಾರತಿ ವಾರ್ಡ್, ಕೊಟ್ಟಿಗೆ ಪಾಳ್ಯ, ಲಗ್ಗೆರೆ, ಲಕ್ಷ್ಮಿದೇವಿ ನಗರ, ಎಚ್‍ಎಂಟಿ ವಾರ್ಡ್, ಜಾಲಹಳ್ಳಿ, ಜೆಪಿ ಪಾರ್ಕ್ ವಾರ್ಡ್, ಯಶವಂತಪುರ ಸೇರಿದಂತೆ ವಿವಿಧೆಡೆಗಳಲ್ಲಿ ಅಬ್ಬರ ಪ್ರಚಾರ ನಡೆಸಿ, ಮುನಿರತ್ನ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಅದೇ ರೀತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದ ಗೊರಗುಂಟೆಪಾಳ್ಯ, ಪೀಣ್ಯ, ಯಶವಂತಪುರ, ಬಿಇಎಂಎಲ್ ಲೇಔಟ್ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿ ಕೃಷ್ಣಮೂರ್ತಿ ಪರ ಪ್ರಚಾರ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News