ಶಿವಮೊಗ್ಗದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ: ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಪಿಎಸ್ಐ

Update: 2020-10-31 14:32 GMT

ಶಿವಮೊಗ್ಗ: ನಗರದಲ್ಲಿ‌ ಇತ್ತೀಚಿಗೆ ನಡೆಯುತ್ತಿರುವ ಕಳ್ಳತನ, ದರೋಡೆ, ಸರಗಳ್ಳತನ ನಡೆಯುತ್ತಿದ್ದು, ಸಾರ್ವಜನಿಕರು ಮುಂಜಾಗೃತೆ ವಹಿಸುವಂತೆ ತುಂಗಾ ನಗರ ಠಾಣೆ ಪಿಎಸ್ಐ ತಿರುಮಲೇಶ್ ತಿಳಿಸಿದರು.

ಇಂದು ಸಂಜೆ ತುಂಗಾನಗರ ಠಾಣಾ ವ್ಯಾಪ್ತಿಯ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿರುವ ಪಿಎಸ್ಐ ತಿರುಮಲೇಶ್, ಮಹಿಳೆಯರು ಒಂಟಿಯಾಗಿ ತಿರುಗಾಡುವಾಗ ಆಭರಣ ಧರಿಸಿ ತಿರುಗಾಡಬಾರದು. ಜೊತೆಗೆ ಆಭರಣ ಧರಿಸಿ ಹೆಚ್ಚಿನ ಜನಸಂದಣಿ ಪ್ರದೇಶದಲ್ಲಿ ವಾಕಿಂಗ್ ಮಾಡಬಾರದು ಎಂದು ಹೇಳಿದರು.

ಮನೆಯಲ್ಲಿರುವ ಆಭರಣವನ್ನು ಹಾಗೂ ಹಣವನ್ನು ಸುರಕ್ಷತೆಗಾಗಿ ಬ್ಯಾಂಕಿನಲ್ಲಿಡುವುದು ಸೂಕ್ತ. ಅಲ್ಲದೇ ಸಾರ್ವಜನಿಕರು ತಮ್ಮ ಊರುಗಳಿಗೆ ಹೋಗುವಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ‌ ನೀಡಿದಲಿ ನಮ್ಮ ಪೊಲೀಸ್ ಸಿಬ್ಬಂದಿ ಮೂಲಕ ಮನೆಯ ಮೇಲೆ ನಿಗಾ ಇಡಲಾಗುವುದು ಎಂದರು.

ವಾಹನಗಳ ಕಳ್ಳತನ ತಡೆಯಲು ರಾತ್ರಿ ವೇಳೆ‌ ವಾಹನಗಳನ್ನು ಕಾಂಪೌಂಡ್ ಒಳಗೆ ನಿಲ್ಲಿಸಬೇಕು. ಬೈಕ್ ಗೆ ಹ್ಯಾಂಡಲ್ ಲಾಕ್ ಮಾಡಿ‌ ನಿಲ್ಲಿಸಬೇಕು. ವಾಹನಗಳಿಗೆ ಅಲರಾಂ ಇರುವ ಸೆಂಟರ್ ಲಾಕ್ ಸಿಸ್ಟಮ್ ಅಳವಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮನೆ ಬಾಡಿಗೆ ನೀಡುವಾಗ ಮನೆಗಳ ಮಾಲಕರು ಎಚ್ಚರವಹಿಸಬೇಕು. ಕೆಲವರು ಕಳ್ಳತನ ಮಾಡಲು ಮನೆ ಬಾಡಿಗೆ ಪಡೆದುಕೊಂಡು ಕಳ್ಳತನ ಮಾಡಿಕೊಂಡು ತಲೆಮರೆಸಿಕೊಂಡು ಹೋಗುತ್ತಾರೆ. ಈ ಹಿನ್ನಲೆಯಲ್ಲಿ ಬಾಡಿಗೆ ನೀಡುವ ಮೊದಲು ಅವರ ಹಿನ್ನೆಲೆ ತಿಳಿದುಕೊಳ್ಳಬೇಕು. ಅಪರಚಿತರಿಗೆ ಮನೆ ಬಾಡಿಗೆ ನೀಡುವ ಮೊದಲು ಠಾಣೆಯಿಂದ ಹಿಂಬರಹವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಠಾಣಾ ಸಿಬ್ಬಂದಿ ಅರುಣ್ ಕುಮಾರ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News