ಮಂತ್ರಿಸ್ಥಾನದ ಆಸೆ ಇಲ್ಲ, ಕೊಟ್ಟರೆ ಬೇಡ ಎಂದು ಹೇಳಲ್ಲ: ಪರಿಷತ್ ಸದಸ್ಯ ಆಯನೂರು ಮಂಜುನಾಥ್

Update: 2020-10-31 16:06 GMT

ಶಿವಮೊಗ್ಗ, ಅ.31: ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡಿದರೆ ನಾನು ಸಚಿವನಾಗಬೇಕೆಂಬ ಆಸೆ ಇಲ್ಲ. ನನಗೆ ಮಂತ್ರಿ ಸ್ಥಾನ ನೀಡಿದರೆ ಬೇಡ ಅಂತ ಹೇಳುವುದಿಲ್ಲ ಎಂದು ಆಯನೂರು ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಚಿವನಾಗಬೇಕೆಂಬ ಆಸೆ ಇಲ್ಲ, ಮುಖ್ಯಮಂತ್ರಿಗಳು ಸಚಿವ ಸ್ಥಾನ ನೀಡುವುದಾದರೆ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಲಿ. ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕೆಂಬ ಆಸೆ ಇಟ್ಟುಕೊಂಡು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದವರಿಗೆ ಮೊದಲ ಆದ್ಯತೆ ನೀಡಬೇಕಿದೆ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಹಳ ರಿಸ್ಕ್ ತೆಗೆದುಕೊಂಡು ಬಂದವರಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬೇಕು. ನಾವು ಸರ್ಕಾರದ ಒಂದು ಭಾಗವಾಗಿದ್ದರೆ ಮಾತ್ರ ಸಾಕು. ಮೂಲ ಪಕ್ಷದವರಾಗಿರುವ ನಮಗೆ ಮಂತ್ರಿಗಳಾಗಲೇಬೇಕೆಂದಿನಿಲ್ಲ. ನನಗೆ ಮಂತ್ರಿ ಸ್ಥಾನದ ಅವಕಾಶ ನೀಡಿದರೆ ಬೇಡ ಅನ್ನಲ್ಲಾ ಎಂದು ಹೇಳಿದರು.

''ಯತ್ನಾಳ ಹೇಳಿಕೆ ಆತ್ಮರತಿ''
ಸಿಎಂ ಬದಲಾವಣೆ ಕುರಿತು ಮಾತನಾಡುವ ಶಾಸಕ ಬಸವನಗೌಡ ಯತ್ನಾಳ್ ಭ್ರಮಾಲೋಕದಲ್ಲಿ ವಿರಮಿಸುತ್ತಿದ್ದಾರೆ. ಅವರ ಈ ಖಿನ್ನತೆಗೆ ಆತ್ಮರತಿ ಎಂದು ಹೆಸರಿಸಿದ ಆಯನೂರು, ಆತ್ಮರತಿಯಿಂದಾಗಿ ತನ್ನನ್ನ ತಾನು ಹೊಗಳಿಕೊಳ್ಳುವ ಖಿನ್ನತೆಗೆ ಯತ್ನಾಳ್ ಒಳಗಾಗಿದ್ದಾರೆ. ಯತ್ನಾಳ್ ನನಗೆ ಬಹಳ ಹಳೆಯ ಸ್ನೇಹಿತ. ಅವರು ಒಮ್ಮೆ ಶಿವಮೊಗ್ಗಕ್ಕೆ ಭೇಟಿ ನೀಡುವುದು ಸೂಕ್ತ, ಭೇಟಿ ನೀಡಿದ್ದಲ್ಲಿ ಅವರ ಮಾನಸಿಕ ಖಿನ್ನತೆಗೆ ಸೂಕ್ತ ಚಿಕಿತ್ಸೆ ಕೊಡಿಸಲು ಸಿದ್ದವೆಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News