ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ: ಕುಮಾರಸ್ವಾಮಿ ಆರೋಪ

Update: 2020-10-31 16:08 GMT

ಬೆಂಗಳೂರು, ಅ.31: ರಾಜರಾಜೇಶ್ವರಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಪೀಣ್ಯ ಕೈಗಾರಿಕೋದ್ಯಮಿಗಳ ಜೊತೆ ಶನಿವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಾರಿ ಜನ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಜನ ಹಣಕ್ಕೆ ಮಾರು ಹೋಗುವುದಿಲ್ಲ. ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಎರಡು, ಮೂರು ಸ್ಥಾನಕ್ಕೆ ಸ್ಪರ್ಧೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಆಧಾರದಲ್ಲಿ ಸಿಎಂ ಹಾಗೆ ಹೇಳ್ತಾರೆ. ಅವರಿಗೇನು ಕನಸು ಬಿದ್ದಿತ್ತಾ? ಎಂದು ತಿರುಗೇಟು ನೀಡಿದರು.

ಆರ್.ಆರ್.ನಗರದಲ್ಲಿ ಅಂಡರ್ ಕರೆಂಟ್ ಕೆಲಸ: ಆರ್. ಆರ್. ನಗರದಲ್ಲಿ ಅಂಡರ್ ಕರೆಂಟ್ ಕೆಲಸ ಮಾಡುತ್ತಿದೆ. ನಮ್ಮ ಗೆಲುವು ಖಚಿತ ಎಂದ ಅವರು, ಅಲ್ಲಿ ನಟ ದರ್ಶನ್ ಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾವ ನಟರ ಪ್ರಚಾರದಿಂದ ಜನ ಮಾರು ಹೋಗುವುದಿಲ್ಲ. ಮತ ಹಾಕುವವರು ಮನೆಯಲ್ಲಿ ಇದ್ದಾರೆ. ಮತದಾನದ ದಿನ ಅವರು ಬಂದು ಯಾರಿಗೆ ಓಟ್ ಹಾಕಬೇಕು ಅಂತ ಅವರಿಗೆ ಗೊತ್ತಿದೆ ಎಂದರು.

ಮುನಿರತ್ನರನ್ನು ಮಂತ್ರಿ ಮಾಡುತ್ತೇವೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿಎಂ 17 ಜನರನ್ನು ಮಂತ್ರಿ ಮಾಡ್ತೀನಿ ಅಂತ ಹಿಂದೆಯೇ ಹೇಳಿದ್ದರು. ಆ ಮಾತು ಉಳಿಸಿಕೊಳ್ತಿದ್ದಾರೆ. ಈಗ ಮುನಿರತ್ನ ಅವರನ್ನು ಮಂತ್ರಿ ಮಾಡ್ತೀನಿ ಎಂದಿದ್ದಾರೆ. ಆದರೆ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿ. ಉತ್ತರ ಕರ್ನಾಟಕದಲ್ಲಿ ಜನ ಸಾಯ್ತಿದ್ದಾರೆ. ಅವರನ್ನು ಉಳಿಸಿಕೊಳ್ಳೋ ಕೆಲಸ ಸಿಎಂ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ, ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಹಾಗೂ ಜೆಡಿಎಸ್ ನಗರ ಅಧ್ಯಕ್ಷ ಪ್ರಕಾಶ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News