ಯಡಿಯೂರಪ್ಪ ಹಸಿ ಸುಳ್ಳಿನ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ: ಡಾ.ಜಿ.ಪರಮೇಶ್ವರ್

Update: 2020-10-31 16:26 GMT

ತುಮಕೂರು,ಅ.31: ಈಗಾಗಲೇ ಪ್ರಯೋಗಿಕವಾಗಿ ನೀರು ಹರಿದಿರುವ ಕೆರೆಗೆ ನೀರು ಹರಿಸುವುದಾಗಿ ಜನರಿಗೆ ಭರವಸೆ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿರಾ ಜನತೆಯ ಮುಂದೆ ನಗೆಪಾಟಲಿಗೆ ಗುರಿಯಾಗಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಪರ ಪ್ರಚಾರ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2010ರಲ್ಲಿ ಆರಂಭವಾದ ಮದಲೂರು ಕೆರೆಗೆ ನೀರು ಹರಿಸುವ ನಾಲಾ ಕಾಮಗಾರಿ 2017ರಲ್ಲಿ ಮುಕ್ತಾಯಗೊಂಡು, 2018ರಲ್ಲಿ ಪ್ರಯೋಗಿಕವಾಗಿ 15 ದಿನ ನೀರು ಹರಿದಿದೆ. ಕೇಂದ್ರ ಸರಕಾರದ 60 ಕೋಟಿ ರೂ. ಅನುದಾನದಲ್ಲಿ ಈ ಯೋಜನೆ ಸಿದ್ದಗೊಂಡಿದ್ದು, ನೀರು ಹರಿಯುವುದೊಂದೆ ಬಾಕಿ. ಈ ಬಗ್ಗೆ ಜನತೆ ಗೊತ್ತಿದ್ದರೂ ಹಸಿ ಸುಳ್ಳು ಹೇಳುವ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಹೊರಟಿರುವುದು ವಿಪರ್ಯಾಸ ಎಂದರು.

ಉಪಚುನಾವಣೆಯ ಹಿನ್ನೆಲೆಯಲ್ಲಿ ಶಿರಾ ಮತ್ತು ಆರ್.ಆರ್.ನಗರ ಉಪಚುನಾವಣೆಯಲ್ಲಿ ಮತದಾರರಿಗೆ ಹಲವಾರು ಭರವಸೆಗಳನ್ನು ನೀಡುತ್ತಿರುವ ಬಿಎಸ್ವೈ ಪರಿಸ್ಥಿತಿಯೇ ಸರಿಯಾಗಿಲ್ಲ. ಅವರನ್ನು ಉಪಚುನಾವಣೆಯ ನಂತರ ಸಿಎಂ ಸ್ಥಾನದಿಂದ ಕೆಳಗೆ ಇಳಿಸುವ ಪ್ರಯತ್ನ ನಡೆದಿದೆ ಎಂದರು.

ಶಿರಾ ಸೇರಿದಂತೆ ಮದ್ಯ ಕರ್ನಾಟಕದ ನೀರಿನ ಬವಣೆ ನೀಗಿಸುವ ಕೆಲಸವನ್ನು ಮಾಡಿರುವ ಏಕೈಕ ಪಕ್ಷ ಕಾಂಗ್ರೆಸ್. ಹೇಮಾವತಿ, ಎತ್ತಿನ ಹೊಳೆ, ಭದ್ರ ಮೇಲ್ದಂಡೆ ಯೋಜನೆಗಳು ಜಾರಿಯಾಗಿರುವುದೇ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಕಾಲದಲ್ಲಿ. ಹಾಗಾಗಿ ಜನತೆ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿಯಲಿದ್ದಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಬಿಜೆಪಿ ಅವಧಿಯಲ್ಲಿ ಶಿರಾ ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದ ಅವರು, ತುಮಕೂರಿಗೆ ಎಚ್‍ಎಂಟಿ ಘಟಕ ತಂದಿದ್ದು, ತುಮಕೂರು ವಿಶ್ವವಿದ್ಯಾಲಯ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಇಡೀ ಏಷ್ಯಾ ಖಂಡದಲ್ಲಿ ಎರಡನೇ ಅತಿದೊಡ್ಡ ಇಂಡಸ್ಟ್ರೀಯಲ್ ಹಬ್, ಎಚ್.ಎ.ಎಲ್. ಘಟಕದ ಚಿಂತನೆ ಎಲ್ಲವೂ ಕಾಂಗ್ರೆಸ್ ಸರಕಾರ ಮಾಡಿರುವುದು ಎಂದರು.

ಕುಣ್ಮುಚ್ಚಿ ಕುಳಿತ ಚುನಾವಣಾ ಆಯೋಗ: ಶಿರಾ ಕ್ಷೇತ್ರದಲ್ಲಿ ಹಣ, ಹೆಂಡ ಹಂಚುತ್ತಿದ್ದರೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ. ಚುನಾವಣಾ ಆಯೋಗ ಯಾವುದೇ ಪಕ್ಷದ ಪರವಾಗಿ ಇರಬಾರದು. ಇನ್ನು 48 ಗಂಟೆಗಳು ಬಾಕಿ ಇರುವಾಗ ಹೊರಗಿನಿಂದ ಬಂದವರನ್ನು ಕ್ಷೇತ್ರದಿಂದ ಆಚೆ ಹಾಕಬೇಕು ಎಂದು ಅವರು ಒತ್ತಾಯಿಸಿದರು.

ತುಮಕೂರು ಡಿಸಿಸಿ ಬ್ಯಾಂಕ್ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಶಿರಾ ಕ್ಷೇತ್ರದಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳ ಮುಂದೆಯೇ ಸಾಕಷ್ಟು ಅವ್ಯವಹಾರ ನಡೆಯುತ್ತಿದ್ದು, ಜಿಲ್ಲೆಯ ಹೊರಗಡೆಯಿಂದ ಜನರನ್ನು ಕರೆಯಿಸಿಕೊಂಡಿರುವ ಬಿಜೆಪಿ, ಅವರ ಮೂಲಕ ಮತದಾರರಿಗೆ ಹಣ, ಹೆಂಡ ಹಂಚುತ್ತಿದೆ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ. ಮತದಾನದ 48 ಗಂಟೆ ಮುಂಚೆ ಮತದಾರರರಲ್ಲದವರು ಕ್ಷೇತ್ರದಿಂದ ಹೊರಗೆ ಹೋಗಬೇಕು ಎಂಬ ನಿಯಮವನ್ನು ಆಯೋಗ ಕಟ್ಟು ನಿಟ್ಟಾಗಿ ಪಾಲಿಸದಿದ್ದಲ್ಲಿ, ನಾವುಗಳೇ ಹುಡುಕಿ ಹೊರ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಅಭ್ಯರ್ಥಿ ಟಿ.ಬಿ.ಜಯಚಂದ್ರ, ವೇಣುಗೋಪಾಲ್, ಶಾಸಕ ವೆಂಕಟರಮಣಪ್ಪ, ಮಾಜಿ ಸಂಸದರಾದ ಎಸ್.ಪಿ.ಮುದ್ದಹನುಮೇಗೌಡ, ಚಂದ್ರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News