ದಲಿತರ ಮೇಲಿನ ದೌರ್ಜನ್ಯ ಹೆಚ್ಚಳ: ದಸಂಸ ರಾಜ್ಯ ಸಂಚಾಲಕ ಎಂ.ಬಿ.ಶ್ರೀನಿವಾಸ್ ಆತಂಕ

Update: 2020-10-31 18:05 GMT

ಮಂಡ್ಯ, ಅ.31: ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಪೊಲೀಸ್ ಇಲಾಖೆ ಅಂಕಿಅಂಶಗಳೇ ತಿಳಿಸಿವೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಾ.ಎಂ.ಬಿ.ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ಶನಿವಾರ ನಡೆದ ಸಮಿತಿಯ ಜಿಲ್ಲಾ ಘಟಕದ ಸಭೆಯಲ್ಲಿ ಮಾತನಾಡಿದ ಅವರು, 2018ರಲ್ಲಿ 130 ಇದ್ದ ದಲಿತ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಒಂದೇ ವರ್ಷದಲ್ಲಿ ಶೇ.61.5ರಷ್ಟು ಹೆಚ್ಚಾಗಿದೆ ಎಂದರು.

2019ರಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಇಂತಹ ಸುಮಾರು 210 ಪ್ರಕರಣಗಳು. ಎಸ್‍ಸಿ ಮತ್ತು ಎಸ್ಟಿ ದೌರ್ಜನ್ಯ ತಡೆಗಟ್ಟುವಿಕೆ ಕಾಯ್ದೆಯಡಿ 2018ರಲ್ಲಿ 1,219, 2019ರಲ್ಲಿ 1,187 ಹಾಗೂ 2020ರ ಆಗಸ್ಟ್ 31 ರವರೆಗೆ 899 ಪ್ರಕರಣ ದಾಖಲಾಗಿವೆ ಎಂದು ಅವರು ತಿಳಿಸಿದರು.

2018ರಿಂದ 2020ರ ಆಗಸ್ಟ್ ವರೆಗೆ ರಾಜ್ಯದ ಎಸ್ಸಿ, ಎಸ್ಟಿ ಮಹಿಳೆಯರ ಮೇಲೆ 428 ಅತ್ಯಾಚಾರ ಮತ್ತು 263 ಕೊಲೆ ಪ್ರಕರಣಗಳು ದಾಖಲಾಗಿವೆ. ಕಳೆದ ಎಂಟು ತಿಂಗಳಲ್ಲಿ 88 ಅತ್ಯಾಚಾರ ಪ್ರಕರಣಗಳು ಮತ್ತು 45 ಕೊಲೆ ಪ್ರಕರಣಗಳನ್ನು ದಾಖಲಾಗಿವೆ ಎಂದು ಅವರು ವಿವರಿಸಿದರು.

ದಲಿತರ ರಕ್ಷಣೆಗಾಗಿ ಸರಕಾರಗಳು ಹಲವು ಕಾನೂನು, ಕಾಯ್ದೆ ಜಾರಿಗೊಳಿಸಿದ್ದರೂ ದಲಿತರ ಮೇಲೆ ದಬ್ಬಾಳಿಕೆ, ದೌರ್ಜನ್ಯಗಳು ಕಡಿಮೆಯಾಗಿಲ್ಲ. ಹಾಗಾಗಿ ದಲಿತರು ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ನ.9ರಂದು ಮಂಡ್ಯ ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮರ್ಯಾದೆ ಹತ್ಯೆಕ್ಕೊಳಗಾದ ಮೇಘನಾಶ್ರೀ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ನ.19ರಂದು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಲಿರುವ ಬೃಹತ್ ಪ್ರತಿಭಟನೆಗೆ ಕಾರ್ಯಕರ್ತರು ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಸಂತೋಷ್‍ಕುಮಾರ್, ಚುಂಚಯ್ಯ, ಚಿಕ್ಕಹಲಗಯ್ಯ, ರವಿ, ಯತೀಶ್, ವಿಜಯ್‍ಕುಮಾರ್, ಕೃಷ್ಣ, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News