ನದಿಯಲ್ಲಿ ಮುಳುಗಿ ಯುವಕ ಮೃತ್ಯು: ಸ್ನೇಹಿತರೇ ಕೊಲೆ ಮಾಡಿದ್ದಾರೆಂದು ಆರೋಪಿಸಿದ ಪೋಷಕರು
ಕೆ.ಆರ್.ಪೇಟೆ, ನ.1: ತಾಲೂಕಿನ ಹೇಮಗಿರಿಯ ಬಳಿ ಹೇಮಾವತಿ ನದಿಯಲ್ಲಿ ಮುಳುಗಿ ಯುವಕನೊಬ್ಬ ಸಾವಿಗೀಡಾಗಿರುವ ಘಟನೆ ರವಿವಾರ ನಡೆದಿದೆ.
ಕೆ.ಆರ್.ಪೇಟೆ ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯ ಪಿ.ಎಲ್.ಡಿ ಬ್ಯಾಂಕ್ ಪಕ್ಕದಲ್ಲಿ ಶ್ರೀ ಭೈರವೇಶ್ವರ ಮೆಸ್ ನಡೆಸುತ್ತಿದ್ದ ಪಾಂಡವಪುರ ತಾಲೂಕಿನ ನಳ್ಳೇನಹಳ್ಳಿಯ ಬೆಟ್ಟೇಗೌಡರ ಪುತ್ರ ಎನ್.ಬಿ.ಅಭಿಷೇಕ್(28) ಮೃತ .
ಕೊಲೆ ಆರೋಪ: ತಮ್ಮ ಮಗನನ್ನು ಆತನ ಸ್ನೇಹಿತರೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಯುವಕನ ಪೋಷಕರು, ಘಟನೆಯ ಸಂಪೂರ್ಣ ತನಿಖೆಯಾಗಿ ನ್ಯಾಯ ದೊರಕಿಸಿಕೊಡುವಂತೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲಿಸರಲ್ಲಿ ಮನವಿ ಮಾಡಿದ್ದಾರೆ.
ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸುರೇಶ್ ಶನಿವಾರ ತಡರಾತ್ರಿ ಮೃತ ಅಭಿಷೇಕ್ ಜೊತೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಆತನ ನಾಲ್ವರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಾಗಮಂಗಲ ಡಿವೈಎಸ್‍ಪಿ ನವೀನ್‍ಕುಮಾರ್ ತನಿಖೆ ನಡೆಸುತ್ತಿದ್ದು, ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಭಿಷೇಕನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.