×
Ad

ಇದೇ ಮೊದಲ ಬಾರಿ ಸರಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಳ: ಸಚಿವ ಸುರೇಶ್‍ ಕುಮಾರ್

Update: 2020-11-01 20:12 IST

ಬೆಂಗಳೂರು, ನ.1: ಕೋವಿಡ್ ಅವಧಿಯಲ್ಲಿ ದುರ್ಬಲ ಕುಟುಂಬಗಳ ಮಕ್ಕಳು ಸರಕಾರಿ ಶಾಲೆಯಲ್ಲಿ ಮುಖಮಾಡಿದ್ದು, ಇದೇ ಮೊದಲ ಬಾರಿಗೆ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಳವಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಅಂಕಿಅಂಶದ ಪ್ರಕಾರ ಸುಮಾರು 90ಸಾವಿರ ಮಕ್ಕಳು ಈಗಾಗಲೇ ಸರಕಾರಿ ಶಾಲೆಗಳಿಗೆ ಸೇರ್ಪಡೆಯಾಗಿದೆ., ಇದು ಕಳೆದ 14 ವರ್ಷಗಳಲ್ಲಿಯೇ ಹೆಚ್ಚು ದಾಖಲಾತಿ ಪ್ರಮಾಣವಾಗಿದೆ ಎಂದು ತಿಳಿಸಿದ್ದಾರೆ.

ಉಭಯ ಮಾಧ್ಯಮ ಶಾಲೆಗಳು: ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ಉಭಯ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದೆ. ಈ ಶಾಲೆಗಳು ಕನ್ನಡ ವಾತಾವರಣದಲ್ಲಿ ಆಂಗ್ಲ ಭಾಷೆಯನ್ನು ಕಲಿಸಲಾಗುತ್ತದೆ. ಆ ಮೂಲಕ ನಮ್ಮ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗಳನ್ನು ಎದುರಿಸಲು ಸಜ್ಜುಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.

ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಪಿಯುಸಿ ವಿಜ್ಞಾನದ ಎನ್‍ಸಿಇಆರ್‍ಟಿ ಪುಸ್ತಕಗಳನ್ನು ಕನ್ನಡ ಮಾಧ್ಯಮದಲ್ಲಿ ತಯಾರಿ ಮಾಡಿ ನೀಡಿರುವುದು ನಮ್ಮ ಸರಕಾರದ ಕನ್ನಡಪರ ಕಾಳಜಿಯ ಧ್ಯೋತಕವಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News