ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ: ಮತದಾರರಿಗೆ ಹಣ ಹಂಚಿಕೆ ಆರೋಪ, ಮಾತಿನ ಚಕಮಕಿ

Update: 2020-11-01 15:02 GMT

ಬೆಂಗಳೂರು, ನ.1: ಇಲ್ಲಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಸಂಜೆ 6ಗಂಟೆಗೆ ತೆರೆಬಿದ್ದಿದ್ದು, ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರಗಳಿಂದ ಗಂಟು-ಮೂಟೆ ಕಟ್ಟಿದ್ದಾರೆ. ನಾಳೆ(ನ.2) ಮನೆ ಮನೆ ಪ್ರಚಾರಕ್ಕೆ ಅವಕಾಶ ಕಲ್ಪಿಸಿದ್ದು, ಮತದಾರರ ಮನವೊಲಿಕೆಗೆ ಕೊನೆಯ ಕ್ಷಣದ ಕಸರತ್ತು ನಡೆಸಲಿದ್ದಾರೆ.

ರವಿವಾರ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ಸಚಿವರು ತಮ್ಮ ಜಿಲ್ಲಾ ಕ್ಷೇತ್ರಗಳಲ್ಲಿ ರಾಜ್ಯೋತ್ಸವ ಧ್ವಜಾರೋಹಣದ ಹಿನ್ನೆಲೆಯಲ್ಲಿ ಉಪ ಚುನಾವಣೆ ಪ್ರಚಾರದಿಂದ ದೂರವೇ ಉಳಿದಿದ್ದರು. ಇನ್ನೂ ಜೆಡಿಎಸ್‍ನ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಶಿರಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಪರ ಅಬ್ಬರದ ಪ್ರಚಾರ ನಡೆಸಿದರು.

ಈ ಮಧ್ಯೆ ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದ ವಿವಿಧೆಡೆಗಳಲ್ಲಿ ಪೊಲೀಸರು ಮತ್ತು ಆಯೋಗದ ಕಣ್ತಪ್ಪಿಸಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತದಾರರಿಗೆ ಹಣ ಹಂಚಿಕೆ ಆರೋಪಗಳು ಕೇಳಿಬಂದಿದ್ದು, ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ಗೊತ್ತಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯ ವರದಿಗಳು ಬಂದಿವೆ.

ಕ್ಷೇತ್ರದಲ್ಲಿದ್ದರೆ ಕೇಸು: ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಸಂಬಂಧಿಸಿದಂತೆ ರವಿವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಈ ಹಿನ್ನಲೆಯಲ್ಲಿ ಎಲ್ಲ ಪಕ್ಷದ ಮುಖಂಡರು, ನಾಯಕರು ಇರಲು ಅವಕಾಶ ಇಲ್ಲ. ತಕ್ಷಣವೇ ಸಂಜೆಯೊಳಗೆ ಕ್ಷೇತ್ರ ಬಿಡಬೇಕು. ಕ್ಷೇತ್ರದಲ್ಲಿ ಇದ್ದರೆ ಕೇಸ್ ದಾಖಲಿಸಲಾಗುತ್ತದೆ ಎಂದು ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರೊಂದಿಗೆ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಲ್ಲ ವಾಹನಗಳ ತಪಾಸಣೆ ನಡೆಯಲಿದ್ದು, ಕಲ್ಯಾಣ ಮಂಟಪ, ಜನ ಸೇರುವ ಕಡೆ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಸಂಜೆ 5 ಗಂಟೆಯಿಂದ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೆ, ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದರು.

ಎಕ್ಸಿಟ್ ಪೋಲ್‍ಗೂ ನಿರ್ಬಂಧ: ಮತದಾನಕ್ಕೆ 48 ಗಂಟೆಯ ಮೊದಲು ಸುದ್ದಿ ವಾಹಿನಿಗಳು ಮತ್ತು ಮಾಧ್ಯಮಗಳಲ್ಲಿ ಎಕ್ಸಿಟ್ ಪೋಲ್, ಜನಾಭಿಪ್ರಾಯ ಬಿತ್ತರಕ್ಕೆ ನಿರ್ಬಂಧ ಹೇರಲಾಗಿದೆ. ಸೋಮವಾರ ಮಾಸ್ಟರಿಂಗ್ ಸೆಂಟರ್, ಜ್ಞಾನಾಕ್ಷಿ ವಿದ್ಯಾನಿಕೇತನ ಇಲ್ಲಿ ಪ್ರಾರಂಭವಾಗಲಿದೆ. ಚುನಾವಣಾ ಸಾಮಗ್ರಿಗಳೊಂದಿಗೆ ಚುನಾವಣಾ ಸಿಬ್ಬಂದಿ ಸಂಜೆ ಮತಗಟ್ಟೆಗಳಿಗೆ ತಲುಪಿದ ವರದಿ ಪಡೆಯಬೇಕಾಗಿದೆ. ಕ್ಷೇತ್ರದಲ್ಲಿ ಒಟ್ಟು 678 ಬೂತ್‍ಗಳಿವೆ. ಆರೋಗ್ಯಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದರು.

82 ಸೂಕ್ಷ್ಮ ಮತಗಟ್ಟೆ: ಆರ್.ಆರ್.ನಗರ ಕ್ಷೇತ್ರದಲ್ಲಿ 21 ದಿನದಲ್ಲಿ ಉಪಚುನಾವಣಾ ಪ್ರಚಾರ ಪ್ರಕ್ರಿಯೆ ಅತ್ಯಂತ ಶಾಂತ ರೀತಿಯಾಗಿ ನಡೆದು ಬಂದಿದೆ. ಕೆಲ ಸಣ್ಣಪುಟ್ಟ ಪ್ರಸಂಗಗಳನ್ನು ಪೊಲೀಸರು ನಿಭಾಯಿಸಿದ್ದಾರೆ. ಒಂದೇ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 30 ತಂಡ ಭದ್ರತೆಗಾಗಿ ನೇಮಕ ನಿಯೋಜನೆ ಮಾಡಲಾಗಿದೆ ಎಂದು ಸುದ್ದಿಗೊಷ್ಟಿಯಲ್ಲಿದ್ದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ರವಿವಾರ ಬಹಿರಂಗ ಪ್ರಚಾರದ ಕಡೆ ದಿನವಾಗಿದ್ದರಿಂದ ಬಂದೋಬಸ್ತ್‍ಗೆ ಬಿಗಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದಲ್ಲಿ ಒಟ್ಟು 678 ಮತಗಟ್ಟೆಗಳಿದ್ದು, 82 ಸೂಕ್ಷ್ಮ ಮತಗಟ್ಟೆಗಳಿದೆ. ಕ್ಷೇತ್ರದಲ್ಲಿ ಒಟ್ಟಾರೆ 181 ಸ್ಥಳಗಳಲ್ಲಿ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೆ ಪ್ರತ್ಯೆಕವಾಗಿ ಎಎಸ್‍ಐ ಹಾಗೂ ಮೂವರು ಸಿಬ್ಬಂದಿ ಇರುತ್ತಾರೆ. ಗೃಹ ರಕ್ಷಕ ದಳದ ಸಿಬ್ಬಂದಿ ಬೂತ್‍ಗಳಲ್ಲಿ ನೇಮಕ ಮಾಡಲಾಗಿದೆ. 2,563 ಜನ ಭದ್ರತೆಗಾಗಿ ನಿಯೋಜನೆ, ಮೊಬೈಲ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಆರ್.ಆರ್.ನಗರ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಆಸ್ಥೆ ವಹಿಸಲಾಗಿದೆ. 102 ಸಂಚಾರಿ ಪಡೆ ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ. 91 ಚೀತಾ ಇಬ್ಬರು ಪೊಲೀಸ್ ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದಾರೆ. ತುರ್ತು ಸಂದರ್ಭದಲ್ಲಿ ಕೇವಲ 5 ನಿಮಿಷದಲ್ಲಿ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಧಾವಿಸಲಿದ್ದಾರೆ. ಇಡೀ ದಿನ 3 ಡಿಸಿಪಿ, 30 ಇನ್ಸಪೆಕ್ಟರ್, 560 ಜನ ಸಬ್ ಇನ್ಸಪೆಕ್ಟರ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಅಡ್ಡಿ ಮಾಡುವವರ ಮೇಲೆ ನಿಗಾ: `ಪ್ಯಾರಾ ಮಿಲಿಟರಿ ಫೋರ್ಸ್ ಭಾಗವಾಹಿಸಲಿದ್ದಾರೆ. 19 ಕೆಎಸ್ಸಾರ್ಪಿ ತುಕಡಿ, 20 ಸಶಸ್ತ್ರ ಮೀಸಲು ಪಡೆ ಭದ್ರತೆಗೆ ಇರಲಿದೆ. ಚುನಾವಣೆ ಆಯೋಗ ನಿದೇರ್ಶನ ಪ್ರಕಾರ 300 ಶಸ್ತ್ರಸ್ತ್ರಾಗಳನ್ನು ವಶಕ್ಕೆ ಪಡೆಯಲಾಗಿದೆ. ಉಪಚುನಾವಣೆಗೆ ಅಡ್ಡಿ ಮಾಡುವವರ ಮೇಲೆ ನಿಗಾ ಇಡಲಾಗುತ್ತದೆ. ರವಿವಾರ ಸಂಜೆ 5 ಗಂಟೆಯಿಂದ ನ. 3ರ ವರೆಗೂ ಮಧ್ಯರಾತ್ರಿವರೆಗೂ ಕ್ಷೇತ್ರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಕಲಂ 144 ಅನ್ವಯ ರವಿವಾರ(ನ.1)ದಿಂದ ಮತದಾನ ಪ್ರಕ್ರಿಯೆ ಮುಗಿಯುವ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ'

-ಕಮಲ್ ಪಂಥ್, ನಗರ ಪೊಲೀಸ್ ಆಯುಕ್ತ

ಫ್ಲೈಯಿಂಗ್ ಸ್ಕ್ವಾಡ್ ನೇಮಕ: `ಆರ್.ಆರ್ ನಗರದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ನೇಮಕ ಮಾಡಲಾಗಿದ್ದು, 9 ಹೆಚ್ಚುವರಿ ತಂಡ, ವಿಎಸ್‍ಟಿ ತಂಡ 8 ನೇಮಕ, 38 ಮಾರ್ಷಲ್‍ಗಳ ತಂಡ, ವಿಡಿಯೋ ಗ್ರಾಫರ್ ತಂಡ 5, 56 ಸೆಕ್ಟರ್ ಆಫೀಸರ್, 8 ಅಬಕಾರಿ ತಂಡಗಳನ್ನು ನೇಮಕ ಮಾಡಲಾಗಿದೆ'

-ಮಂಜುನಾಥ್ ಪ್ರಸಾದ್ ಚುನಾವಣಾಧಿಕಾರಿ, ಬಿಬಿಎಂಪಿ ಆಯುಕ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News