ಮೈಸೂರು ದಸರಾ ಆಚರಣೆಗೂ ರಾಜವಂಶಸ್ಥರಿಗೂ ಯಾವುದೇ ಸಂಬಂಧವಿಲ್ಲ: ಪ್ರೊ.ನಂಜರಾಜೇ ಅರಸ್

Update: 2020-11-01 15:08 GMT

ಮೈಸೂರು,ನ.1: ಇವರ ಸ್ವಂತ ಹಣದಲ್ಲಿ ಮೈಸೂರು ರಾಜವಂಶಸ್ಥರಿಗೆ 40 ಲಕ್ಷ ಅಲ್ಲ, 40 ಕೋಟಿ ರೂ ಬೇಕಾದರೂ ನೀಡಲಿ. ಆದರೆ ಸಾರ್ವಜನಿಕರ ತೆರಿಗೆ ಹಣದಿಂದಲ್ಲ ಎಂದು ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನ ಅಂದಿನ ಮಹರಾಜರುಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್ ಅವರ ಕೊಡುಗೆ ಈ ನಾಡಿಗೆ ಸಾಕಷ್ಟಿದೆ. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಈಗಿನ ರಾಜ ರಾಜವಂಶಸ್ಥ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು.

ಮೈಸೂರು ದಸರಾ ಆಚರಣೆಗೂ ರಾಜವಂಶಸ್ಥರಿಗೂ ಯಾವುದೇ ಸಂಬಂಧವಿಲ್ಲ, ಅಂತಹದರಲ್ಲಿ ಅವರಿಗೆ ಗೌರವ ಸಂಭಾವನೆಯಾಗಿ ಏಕೆ 40 ಲಕ್ಷ ರೂ. ನೀಡಬೇಕು. ಚಿನ್ನದ ಅಂಬಾರಿ ಸರ್ಕಾರದ ಸ್ವತ್ತು. ಅದನ್ನು ಪಡೆಯಲು ಇವರಿಗೆ ಬಾಡಿಗೆ ರೂಪದಲ್ಲಿ ಇಷ್ಟೊಂದು ಹಣ ನೀಡಬೇಕೆ ಎಂದ ಅವರು, ಈಗಿನ ರಾಜವಂಶಸ್ಥರೇನು ಆಕಾಶದಿಂದ ಇಳಿದು ಬಂದಿಲ್ಲ ಎಂದು ಹರಿಹಾಯ್ದರು.

ಮೈಸೂರು ರಾಜವಂಶಸ್ಥರಿಗೆ ಸರ್ಕಾರ ನೀಡಿರುವ ಗೌರವ ಸಂಭಾವನೆ ಸಾರ್ವಜನಿಕರ ಭಿಕ್ಷೆ, ಈಗಿನ ರಾಜವಂಶಸ್ಥೆ ಭಿಕ್ಷೆಯನ್ನು ಪಡೆಯುತ್ತಿದ್ದಾರೆ. ಅವರಿಗೆ ನಿಜವಾದ ಗೌರವ ಮಾನವೀಯತೆ ಇದ್ದರೆ ಇಂತಹ ಸಂದರ್ಭದಲ್ಲಿ ಆ ಹಣವನ್ನು ಕೊರೋನ ವಾರಿಯರ್ಸ್‍ಗೆ ನೀಡಬಹುದಿತ್ತು. ಅಂತಹ ಮಾನವೀಯ ಗುಣ ಅವರಿಗಿಲ್ಲ ಎಂದು ಕಿಡಿಕಾರಿದರು.

ರಾಜವಂಶಸ್ಥರಿಗೆ ಹಿಂದಿನಿಂದಲೂ ಗೌರವ ಧನ ನೀಡುತ್ತಿರಲಿಲ್ಲ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದಾಗ ಶ್ರೀಕಂಠದತ್ತ ಒಡೆಯರ್ ಅರಮನೆ ನಿರ್ವಹಣಾ ವೆಚ್ಚಕ್ಕೆ ಸ್ವಲ್ಪ ಹಣ ನೀಡುವಂತೆ ಕೇಳಿಕೊಂಡರು. ಆಗ ಎಸ್.ಎಂ.ಕೃಷ್ಣ ಅವರು 5 ಸಾವಿರ ರೂ. ನೀಡಿದರು. ಅದು ವರ್ಷ ವರ್ಷ ನೀಡುತ್ತಾ ಬರಲಾಯಿತು. ಅಲ್ಲಿಂದ 2015 ರವರೆಗೆ ಸುಮಾರು 4 ಕೋಟಿ ರೂ. ಅಷ್ಟು ಹಣ ನೀಡಲಾಗಿದೆ. ಇಷ್ಟು ಹಣದಲ್ಲಿ ಎರಡು ಚಿನ್ನದ ಅಂಬಾರಿಯನ್ನೇ ಮಾಡಿಸಬಹುದಿತ್ತು ಎಂದು ಹೇಳಿದರು.

ಚಿನ್ನದ ಅಂಬಾರಿ ಸರ್ಕಾರದ ಸ್ವತ್ತು. ಅದನ್ನು ಜಂಬೂ ಸವಾರಿ ವೇಳೆ ನೀಡಲು ಪ್ರಮೋದಾದೇವಿ ಒಡೆಯರ್ ಹಣ ಕೇಳುತ್ತಿದ್ದಾರೆ. ಹಣ ನೀಡದಿದ್ದರೆ ಚಿನ್ನದ ಅಂಬಾರಿ ಕೊಡುವುದಿಲ್ಲ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ. ಅದಕ್ಕೆ ಸರ್ಕಾರದವರು ಹಣ ನೀಡುತ್ತಿದ್ದಾರೆ. ಇವರಿಗೆ ನಿಜವಾಗಲೂ ಮಾನ ಮರ್ಯಾದೆ ಇದ್ದರೆ ಅವರಿಗೆ ಹಣ ನೀಡಬಾರದು ಎಂದು ಹೇಳಿದರು.

ರಾಜವಂಶಸ್ಥರಿಗೆ ನೀಡುತ್ತಿರುವ ಹಣದಲ್ಲಿ ನನ್ನದೂ ಪಾಲಿದೆ. ಹಾಗಾಗಿ ನಾನು ಪ್ರಶ್ನೆ ಮಾಡುತ್ತೇನೆ. ಅವರಿಗೆ ನೀಡುವ ಹಣದ ಬಗ್ಗೆ ಯಾರೂ ಪ್ರಶ್ನೆ ಮಾಡಬಾರದು ಎಂದರೆ ಹೇಗೆ ? ಸೋಮಶೇಖರ್ ಅವರ ಮನೆಯ ಹಣವನ್ನು ತಂದು ಕೊಡಲಿ. ಇದನ್ನು ಪ್ರಶ್ನೆ ಮಾಡಬಾರದು ಎಂದು ಹೇಳಲು ಸೋಮಶೇಖರ್ ಯಾರು ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಬರೀ ಸುಳ್ಳುಗಳನ್ನೇ ಹೇಳಿಕೊಂಡು ತಿರುಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಶಾಸಕನ ವರೆಗೂ ಬರೀ ಸುಳ್ಳುಗಳೆ. ಈ ಹಿಂದೆ ಮೈಸೂರಿಗೆ ಬರುವ ಯಾವುದೇ ರಾಜಕಾರಣಿಗಳು ಚಾಮುಂಡಿ ಬೆಟ್ಟಕ್ಕೆ ಹೋಗಿ ಶ್ರೀಚಾಮುಂಡೇಶ್ವರಿ ದೇವಿ ದರ್ಶನ ಮಾಡಿಕೊಂಡು ಬರುತ್ತಿದ್ದರು. ಆದರೆ ಬಿಜೆಪಿಯವರ ಅಧಿಕಾರಕ್ಕೆ ಬಂದ ಮೇಲೆ ಇನ್ನೊಂದು ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದ್ದಾರೆ. ಅರಮನೆಗೆ ಬಂದು ಮತ್ತೊಬ್ಬ ದೇವಿ ದರ್ಶನ ಮಾಡುವುದನ್ನು ಪಾಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News