ಮೈಸೂರು ದಸರಾ ಮಹೋತ್ಸವದ ಖರ್ಚು 2.05 ಕೋಟಿ ರೂ.: ಸಚಿವ ಎಸ್.ಟಿ.ಸೋಮಶೇಖರ್

Update: 2020-11-01 15:12 GMT

ಮೈಸೂರು,ನ.1: ದಸರಾ ಮಹೋತ್ಸವಕ್ಕೆ 2,91,83,167.00 ರೂ. ಖರ್ಚು ಮಾಡಲಾಗಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಗರದ ಅರಮನೆ ಮಂಡಳಿ ಆವರಣದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೋನ ಹಿನ್ನಲೆಯಲ್ಲಿ ಈ ಬಾರಿ ಸರಳ ದಸರಾ ಆಚರಣೆ ಮಾಡಲಾಗಿದ್ದು, ಮುಖ್ಯಮಂತ್ರಿಗಳು 10 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದರು. ಅದರಲ್ಲಿ ಮಂಡ್ಯ ಜಿಲ್ಲೆಗೆ 50 ಸಾವಿರ ರೂ, ಚಾಮರಾಜನಗರ ಜಿಲ್ಲೆ ದಸರಾಗೆ 36 ಸಾವಿರ ರೂ. ಬಿಡುಗಡೆ ಮಾಡಲಾಗಿದೆ. ಇನ್ನೂ ಮೈಸೂರು ದಸರಾಗೆ 2.05 ಕೋಟಿ ರೂ ಖರ್ಚು ಮಾಡಲಾಗಿದ್ದು, ಇನ್ನುಳಿದ 7,08,16,833.00 ಕೋಟಿ ರೂ. ಗಳು ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ ಎಂದು ಮಾಹಿತಿ ನೀಡಿದರು.

ಖರ್ಚು ಮಾಡಿರುವ ಮೊತ್ತ: ಸಾಂಸ್ಕೃತಿಕ ದಸರಾ ಕಾರ್ಯಕ್ರಮಗಳ ನಿರ್ವಹಣೆ ಮತ್ತು ಕಲಾವಿದರ ಸಂಭಾವನೆ ನೀಡಲು ಸಾಂಸ್ಕೃತಿಕ ಉಪ ಸಮಿತಿಗೆ 44.78 ಲಕ್ಷ.ರೂ, ಅರಣ್ಯ ಇಲಾಖೆಗೆ ದಸರಾ ಆನೆಗಳ ನಿರ್ವಹಣಾ ವೆಚ್ಚ 35 ಸಾವಿರ ರೂ,  ಜಂಬೂ ಸವಾರಿ ಕಾರ್ಯಕ್ರಮಗಳ ನಿರ್ವಹಣೆ 16.94 ಲಕ್ಷ ರೂ, ಲೋಕೋಪಯೋಗಿ ಇಲಾಖೆಗೆ ದಸರಾ ಕಾರ್ಯಕ್ರಮಗಳ ವೇದಿಕೆ ಮತ್ತು ಅಗತ್ಯ ವ್ಯವಸ್ಥೆ ಕಲ್ಪಿಸಿರುವ ಬಾಬ್ತು 41.08 ಲಕ್ಷ ರೂ, ಮೈಸೂರು ರಾಜವಂಶಸ್ಥರಿಗೆ ಗೌರವ ಸಂಭಾವನೆ 40 ಲಕ್ಷ ರೂ, ಲೈವ್ ಸ್ಟ್ರೀಮಿಂಗ್ 5.90 ಲಕ್ಷ ರೂ, ದಸರಾ ಜಂಬೂ ಸವಾರಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲು ಡಿ.ಡಿ.ಚಂದನದ ಬಾಬ್ತು 5.70 ಲಕ್ಷ ರೂ, ನೀಡಲಾಗಿದೆ.

ಆನೆ ಬಂಡಿ ಸ್ತಬ್ದಚಿತ್ರ 3.75 ಲಕ್ಷ ರೂ, ಸ್ತಬ್ದಚಿತ್ರ ತಯಾರಿಸಲು ತಗಲಿದ ಬಾಡಿಗೆ ಮತ್ತು ಇತರೆ ವೆಚ್ಚ 35 ಸಾವಿರ ರೂ,  ಗಣ್ಯರು ಮತ್ತು ಕಲಾವಿದರಿಗೆ ಸ್ಥಳಾವಕಾಶ ಮತ್ತು ಸಾರಿಗೆ ವ್ಯವಸ್ಥೆಗೆ 2.67 ಲಕ್ಷ ರೂ, ಗಣ್ಯರ ಆಹ್ವಾನಕ್ಕೆ ರೇಷ್ಮೆ ಶಾಲು ಹಾರ ತುರಾಯಿಗೆ 1.80 ಲಕ್ಷ ರೂ, ಬೆಂಗಳೂರಿನಲ್ಲಿ ನಡೆಸಿದ ಉನ್ನತ ಮಟ್ಟದ ಸಮಿತಿ ಸಭೆಗೆ ಶಿಷ್ಟಾಚಾರಕ್ಕೆ ತಗುಲಿದ ವೆಚ್ಚ 1.75 ಲಕ್ಷ ರೂ, ದಸರಾ ಸಂಬಂಧ ಮೈಸೂರಿನಲ್ಲಿ ನಡೆಸಲಾಗಿರುವ ವಿವಿಧ ಸಭೆಗಳಿಗೆ ಕಾಫಿ,ಟೀ, ಸ್ನಾಕ್ಸ್ ಒದಗಿಸಿದ ಬಾಬ್ತು 1.22 ಲಕ್ಷ ರೂ, ದಸರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮುದ್ರಣದ ಬಾಬ್ತು 98 ಸಾವಿರ ರೂ., ಚಾಮುಂಡಿ ಬೆಟ್ಟದ ಲೈವ್ ಸ್ಟ್ರೀಮಿಂಗ್‍ಗೆ ಬಿಎಸ್‍ಎನ್‍ಎಲ್ ಗೆ ನೀಡಿರುವ ಬಾಬ್ತು 78 ಸಾವಿರ ರೂ, ಲೇಖನ ಸಾಮಾಗ್ರಿ ಖರೀದಿಸಿದ ಬಾಬ್ತು 69 ಸಾವಿರ ರೂ, ಜೊತೆಗೆ 4 ಸಾವಿರ ರೂ, ದಸರಾ ಜಂಬೂ ಸವಾರಿ ಕಾರ್ಯಕ್ರಮದ ನೇರ ವೀಕ್ಷಕ ವಿವರಣೆ ಬಿತ್ತರಿಸಿದ ಬಾಬ್ತು ಆಕಶವಾಣಿಗೆ 65 ಸಾವಿರ ರೂ ನೀಡಲಾಗಿದೆ.

ಮಾಧ್ಯಮ ಪ್ರತಿನಿಧಿಗಳಿಗೆ ಊಟದ ವೆಚ್ಚ ವಾರ್ತಾ ಇಲಾಖೆಗೆ 44 ಸಾವಿರ ರೂ, ವಿಸ್ಮಯ ಬುಕ್‍ಹೌಸ್‍ಗೆ ದಸರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ವಿನ್ಯಾಸದ ಬಾಬ್ತು 38 ಸಾವಿರ ರೂ, ದಸರಾ ಕಾರ್ಯಕ್ರಮಕ್ಕೆ ಆಗಮಿಸಿದ ಆನೆಗಳ ವಿಮಾ ವೆಚ್ಚ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಮೈಸೂರು. 13 ಸಾವಿರ ರೂ, ವಿಸ್ಮಯ ಬುಕ್ ಹೌಸ್‍ಗೆ ಕೊರೋನ ವಾರಿಯರ್ಸ್‍ಗಳ ಪ್ರಮಾಣ ಪತ್ರ ಮುದ್ರಣ ವೆಚ್ಚ 8 ಸಾವಿರ ರೂ, ನೀಡಿದ್ದು, ಒಟ್ಟು 2,05 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಶಾಸಕರುಗಳಾದ ಎಲ್.ನಾಗೇಂದ್ರ, ಹರ್ಷವರ್ಧನ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ನಗರ ಪೊಲೀಸ್ ಆಯುಕ್ತ ಡಾ.ಚಂದ್ರ ಗುಪ್ತ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿ.ಪಂ. ಸಿಇಓ ಡಿ.ಭಾರತಿ, ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜವಂಶಸ್ಥರ ಗೌರವಧನದ ಬಗ್ಗೆ ಪ್ರಶ್ನೆ ಮಾಡಬಾರದು
ಮೈಸೂರು ರಾಜವಂಶಸ್ಥರಿಗೆ ನೀಡುವ ಗೌರವಧನ ವನ್ನು ಯಾರೂ ಪ್ರಶ್ನೆ ಮಾಡಬಾರದು ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.

ರಾಜವಂಶಸ್ಥರಿಗೆ 40 ಲಕ್ಷ ರೂ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜವಂಶಸ್ಥರಿಗೆ ಈ ಹಿಂದಿನಿಂದಲೂ ಗೌರವ ಧನ ನೀಡಲಾಗುತ್ತಿದೆ. ಅದರಂತೆ ಈ ಬಾರಿಯೂ ನೀಡಲಾಗಿದೆ. ಹಾಗಾಗಿ ಅವರಿಗೆ ನೀಡುವ ಗೌರವ ಧನವನ್ನು ಯಾರೂ ಪ್ರಶ್ನಿಸಬಾರದು ಎಂದು ಹೇಳಿದರು.

ಚಿನ್ನದ ಅಂಬಾರಿ ಸರ್ಕಾರದ್ದು ಅದನ್ನು ಪಡೆಯಲು ಯಾಕೆ ಅವರಿಗೆ ಸಾರ್ವಜನಿಕರ ಹಣವನ್ನು ನೀಡಬೇಕು ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಅದೇನೆ ಇರಲಿ ಅವರಿಗೆ ನೀಡುವ ಹಣವನ್ನು ಯಾರೂ ಪ್ರಶ್ನಿಸಬಾರದು ಎಂದು ಪುನರುಚ್ಚರಿಸಿದರು.

ಸರಳ ಆಚರಣೆ ಮಾಡಿದರೂ ವೇದಿಕೆಗೆ 41 ಲಕ್ಷ ರೂ ಅಗತ್ಯವಿತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಲೋಕೋಪಯೋಗಿ ಇಲಾಖೆಯವರು ಇದರ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರು ನೀಡಿರುವ ಎಸ್ಟಿಮೇಟ್‍ನಂತೆ ಹಣ ನೀಡಲಾಗಿದೆ ಎಂದರು.

ಇನ್ನೂ ಡಿ.ಡಿ.ಚಂದನ ವಾಹಿನಿಗೆ ದಸರಾ ಜಂಬೂ ಸವಾರಿ ನೇರಪ್ರಸಾರ ಮಾಡಲು 5.70 ಲಕ್ಷ ರೂ ನೀಡಲಾಗಿದೆ. ಆಕಾಶವಣಿಗೆ ದಸರಾ ಜಂಬೂ ಸವಾರಿ ಕಾರ್ಯಕ್ರಮದ ನೇರ ವೀಕ್ಷಕ ವಿವರಣೆ ಬಿತ್ತರಿಸಿದ್ದಕ್ಕೆ 60 ಸಾವಿರ ರೂ. ನೀಡಲಾಗಿದ್ದು, ಬೆಂಗಳೂರಿನಲ್ಲಿ ನಡೆಸಿದ ಉನ್ನತ ಮಟ್ಟದ ಸಮಿತಿ ಸಭೆಗೆ ಶಿಷ್ಟಾಚಾರಕ್ಕೆ 1.75 ಲಕ್ಷ ರೂ, ದಸರಾ ಸಂಬಂಧ ಮೈಸೂರಿನಲ್ಲಿ ನಡೆಸಲಾಗಿರುವ ವಿವಿಧ ಸಭೆಗಳಿಗೆ ಕಾಫಿ,ಟೀ, ಸ್ನಾಕ್ಸ್ ಗೆ 1.22 ಲಕ್ಷ ರೂ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News