ಆರ್.ಆರ್.ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹಣ ಹಂಚಿಕೆ ಆರೋಪ: ವಿಡಿಯೊ ಬಿಡುಗಡೆ ಮಾಡಿದ ಡಿ.ಕೆ.ಸುರೇಶ್

Update: 2020-11-01 15:15 GMT

ಬೆಂಗಳೂರು, ನ. 1: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ವಿಡಿಯೊ ಸಮೇತ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಆರೋಪಿಸಿದರು.

ರವಿವಾರ ನಗರದ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯೇ ನಾಯಕರು ಚುನಾವಣೆಗಳಲ್ಲಿ ಅಕ್ರಮಗಳನ್ನು ಮಾಡಿ, ತದನಂತರ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಾರೆ. ಆದರೆ, ನಮ್ಮ ಬಳಿ ಬಿಜೆಪಿ ಅಕ್ರಮಗಳ ಸಾಕ್ಷ್ಯ ಇದೆ ಎಂದು ವಾಗ್ದಾಳಿ ನಡೆಸಿದರು.

ಹಲವು ದಿನಗಳಿಂದ ಕ್ಷೇತ್ರದಲ್ಲಿ ಚುನಾವಣೆ ಅಕ್ರಮಗಳು ನಡೆಯುತ್ತಿದ್ದರೂ, ಸರಕಾರ ಮತ್ತು ಚುನಾವಣಾಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಜತೆಗೆ, ಸ್ಥಳೀಯವಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ ಎಂದ ಅವರು ಬಿಜೆಪಿ ನಾಯಕರು ಒಂದೊಂದು ಮತಕ್ಕೂ 1 ಸಾವಿರ ರೂ.ನಿಂದ 2 ಸಾವಿರ ರೂ. ಹಣವನ್ನು ಮತದಾರರಿಗೆ ಹಂಚಿಕೆ ಮಾಡುತ್ತಿದ್ದಾರೆ. ನಮ್ಮ ಬಳಿ ಸಾಕ್ಷ್ಯವಿದ್ದು, ಚುನಾವಣೆ ಆಯೋಗ ಈಗಲಾದರೂ ಕ್ರಮಕ್ಕೆ ಮುಂದಾಗಲಿದೆಯೇ ಎಂದು ಪ್ರಶ್ನೆ ಮಾಡಿದರು.

ಆಣೆ ಮಾಡಲಿ: ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಮತದಾರರ ಚೀಟಿ ಹಗರಣದಲ್ಲಿ ಭಾಗಿಯಾಗಿಲ್ಲ ಎಂದರೆ, ಒಮ್ಮೆ ತಿರುಪತಿ ದೇವಾಲಯಕ್ಕೆ ಹೋಗಿ, ಆಣೆ ಮಾಡಿ, ವಿಡಿಯೋ ಬಿಡುಗಡೆ ಮಾಡಲಿ ಎಂದು ಡಿ.ಕೆ.ಸುರೇಶ್ ಸವಾಲು ಹಾಕಿದರು. ಮೊದಲ ದಿನ ಸಂಭಾಷಣೆ, ಎರಡನೆ ದಿನ ನಟನೆ, ಮತ್ತೊಂದು ಸಂಕಲನ ಹೀಗೆ ಎಲ್ಲ ವಿದ್ಯೆಯನ್ನು ನಿರ್ಮಾಪಕ ಮುನಿರತ್ನ ಕಲಿತುಕೊಂಡಿದ್ದಾರೆ.

ಇದಕ್ಕಾಗಿಯೇ ಬಿಜೆಪಿ ನಾಯಕರಿಗೆ ಅವರು ಅಚ್ಚುಮೆಚ್ಚು ಎಂದು ವ್ಯಂಗ್ಯವಾಡಿದ ಅವರು, ಕ್ಷೇತ್ರದ ಬಿಜೆಪಿ ನಾಯಕ ತುಳುಸಿ ಮುನಿರಾಜು ಗೌಡ ಅವರನ್ನು ಕತ್ತು ಹಿಸುಕಿ ಸಾಯಿಸಲಾಗಿದೆ. ಆಗ ಸಚಿವ ಆರ್.ಅಶೋಕ್ ಅವರ ಪೌರುಷ ಎಲ್ಲಿಗೆ ಹೋಗಿತ್ತು. ಅಲ್ಲಿನ ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲಿಸಿ ಕಿರುಕುಳ ನೀಡಿದಾಗ ಸಹಾಯಕ್ಕೆ ಬಿಜೆಪಿ ನಾಯಕರು ಏಕೆ ಹೋಗಿಲ್ಲ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News