ಪ್ರಾಂಶುಪಾಲರಿಗೆ, ಶಿಕ್ಷಕರಿಗೆ 7 ತಿಂಗಳಿಂದ ಸಿಗದ ವೇತನ: ಸ್ವಯಂಪ್ರೇರಿತ ಪ್ರಕರಣ ದಾಖಲು

Update: 2020-11-02 13:34 GMT

ಬೆಂಗಳೂರು, ನ.2: ರಾಜ್ಯದಲ್ಲಿರುವ 450 ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ 532 ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಕಳೆದ ಏಳು ತಿಂಗಳಿನಿಂದ ವೇತನ ಸಿಗದ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಾಗಿದೆ.

ಕರ್ನಾಟಕ ಲೋಕಾಯುಕ್ತ ಜಸ್ಟೀಸ್ ವಿಶ್ವನಾಥ ಶೆಟ್ಟಿ ಅವರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸಮಾಜ ಕಲ್ಯಾಣ ಇಲಾಖೆಗೆ ಶಿಕ್ಷಕರ ದೂರು-ದುಮ್ಮಾನಗಳು ಮತ್ತು ಸಂಕಷ್ಟಗಳನ್ನು ಆದಷ್ಟು ಬೇಗನೆ ಬಗೆಹರಿಸುವಂತೆ ಹೇಳಿದ್ದಾರೆ.

ಉದ್ಯೋಗಿಗೆ ಪಾವತಿಸುವ ವೇತನವು ಅನಪೇಕ್ಷಿತ ಪಾವತಿಗಳಲ್ಲ ಎಂದು ಗಮನಸೆಳೆಯುವ ಅಗತ್ಯವಿಲ್ಲ. ಒಬ್ಬ ನೌಕರನು ಕೈಗೊಂಡ ಕೆಲಸಕ್ಕಾಗಿ ಗಳಿಸಿದ ಮೊತ್ತವಾಗಿರುತ್ತದೆ ಎಂದು ರಾಜ್ಯ ಸರಕಾರವನ್ನು ನೆನಪಿಸಿರುವ ಅವರು, ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಸಂಬಳ ನೀಡುವಲ್ಲಿ ವಿಳಂಬವು ಅವರ ಜೀವನ ಹಕ್ಕಿನ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ (ಸಂವಿಧಾನದ 21 ನೇ ವಿಧಿ), ಮತ್ತು ಈ ಶಾಲೆಗಳಲ್ಲಿ ಓದುವ ಮಕ್ಕಳ ಶಿಕ್ಷಣ ಗುಣಮಟ್ಟದ ಮೇಲೆ ಸಹ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸರಕಾರದಿಂದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸುವಂತೆ ಆದೇಶ ನೀಡಿದ್ದಾರೆ.

ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಸಮಾಜ ಕಲ್ಯಾಣ ಇಲಾಖೆಯಡಿ ಬರುತ್ತಿದ್ದು, ಪ್ರಾಂಶುಪಾಲರು ಮತ್ತು ಶಿಕ್ಷಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಗುತ್ತಿಗೆ ನೌಕರರಿಗೆ ವೇತನ ನೀಡಬೇಕೆಂದು ಕಳೆದ ಆಗಸ್ಟ್ 26ರಂದು ಸರಕಾರ ಹೇಳಿದರೂ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಇನ್ನೂ ವೇತನ ಬಿಡುಗಡೆಯಾಗಿಲ್ಲ ಎಂದು ತಿಳಿದುಬಂದಿದೆ.

ಬಾಕಿ ಉಳಿಕೆ ವೇತನವನ್ನು ಆದಷ್ಟು ಶೀಘ್ರವೇ ಬಿಡುಗಡೆ ಮಾಡುವಂತೆ ಹಿಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದರೂ, ಅದಿನ್ನೂ ಕಾರ್ಯಗತವಾಗಿಲ್ಲ, ವೇತನ ಸಿಕ್ಕಿಲ್ಲ ಎಂಬ ಚಿಂತೆ ಒಂದೆಡೆಯಾದರೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಮರು ಮೌಲ್ಯಮಾಪನ ಮತ್ತು ಇನ್ನೂ ಹಲವು ಕರ್ತವ್ಯಗಳು ಈ ಶಿಕ್ಷಕರಿಗಿವೆ. ಈ ಬಗ್ಗೆ ಮೂರು ವಾರಗಳಲ್ಲಿ ವರದಿ ನೀಡುವಂತೆ ಇಲಾಖೆಯ ಅಧಿಕಾರಿಗಳಿಗೆ ಲೋಕಾಯುಕ್ತರು ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News