ಡಾ.ಬಿ.ಆರ್.ಅಂಬೇಡ್ಕರ್ ಬರಹ-ಭಾಷಣ ಮರುಮುದ್ರಣಕ್ಕೆ ಸಂಸ್ಕೃತಿ ಸಚಿವ ಸಿ.ಟಿ.ರವಿ ಸೂಚನೆ
ಬೆಂಗಳೂರು, ನ.2: ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳನ್ನು ಒಳಗೊಂಡ ಸಂವಿಧಾನ ರಚನಾ ಸಮಿತಿ ನಡಾವಳಿಗಳ 22 ಸಂಪುಟಗಳನ್ನು ಮರುಮುದ್ರಣ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಕಾಡೆಮಿ ಮತ್ತು ಪ್ರಾಧಿಕಾರ ಹಾಗೂ ಇಲಾಖೆ ಅಧಿಕಾರಿಗಳ ಜೊತೆ ಇಲಾಖೆಯ ಪರಿಶೀಲನಾ ಸಭೆ ನಡೆಸಿದ ಅವರು, ಕುವೆಂಪು ಭಾಷಾ ಭಾರತಿ ವತಿಯಿಂದ 22 ಸಂಪುಟಗಳನ್ನು ಮರುಮುದ್ರಣ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು. ಪ್ರತಿ ಸಂಪುಟವು ಒಂದು ಸಾವಿರ ಪುಟಗಳನ್ನು ಒಳಗೊಂಡಿದ್ದು, ಶೀಘ್ರ ಮರುಮುದ್ರಣ ಮಾಡಬೇಕೆಂದು ನಿದೇರ್ಶನ ನೀಡಿದರು.
ಚಿತ್ರಕಲಾ ಪರಿಷತ್ ನೀಡುತ್ತಿರುವ ಸಾಂಪ್ರದಾಯಿಕ ಗುರುಕುಲ ತರಬೇತಿಗೆ ಶೈಕ್ಷಣಿಕ ಮಾನ್ಯತೆ ನೀಡಬೇಕೆಂಬ ಬೇಡಿಕೆಗೆ ಸ್ಪಂದಿಸಿದ ಅವರು, ಶೀಘ್ರದಲ್ಲೇ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಲಲಿತ ಕಲಾ ಅಕಾಡೆಮಿ, ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ಕರೆಯುವ ಭರವಸೆ ನೀಡಿದರು. ಇದು ಹಲವು ದಿನಗಳ ಬೇಡಿಕೆಯಾಗಿದ್ದು, ಖುದ್ದು ನಾನೇ ಸಿಎಂ ಯಡಿಯೂರಪ್ಪನವರ ಜೊತೆ ನಡೆಸಿ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡುತ್ತೇನೆ. ಗುರುಕುಲ ಶಿಕ್ಷಣಕ್ಕೆ ಮಾನ್ಯತೆ ನೀಡಲು ತಾವು ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಭೆಗೆ ಆಶ್ವಾಸನೆ ನೀಡಿದರು.
ಪ್ರಮಾಣಪತ್ರ ಪಡೆಯುವ ಶಿಕ್ಷಣಕ್ಕೆ ಒತ್ತು ಕೊಡದೆ ಸ್ವಯಂ ಉದ್ಯೋಗ ಸೃಷ್ಟಿಸುವಂತಹ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಅಗತ್ಯವಿದೆ. ಇದಕ್ಕೆ ಅಕಾಡೆಮಿಗಳ ವತಿಯಿಂದ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳಿಗೆ ಕೊಡುಗು ಭಾಷೆಯಲ್ಲಿ ಶಿಕ್ಷಣ ನೀಡುತ್ತಿದ್ದು, ಇದನ್ನು 3ನೆ ಭಾಷೆಯಾಗಿ ಪರಿಗಣಿಸಬೇಕೆಂದು ಕೊಡುಗು ಅಕಾಡೆಮಿ ಅಧ್ಯಕ್ಷರು ಮಾಡಿಕೊಂಡ ಮನವಿಗೆ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಲು ಸರಕಾರದ ನಿರ್ಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಕೊರೋನ ಸಂದರ್ಭದಲ್ಲೂ ಪ್ರಾಧಿಕಾರ ಹಾಗೂ ಅಕಾಡೆಮಿಗಳ ಅಧ್ಯಕ್ಷರು ಕಲಾವಿದರಿಗೆ ಪೂರಕವಾದ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ನನ್ನ ನಿರೀಕ್ಷೆಗೆ ತಕ್ಕಂತೆ ಅಕಾಡೆಮಿಗಳು ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸರಕಾರ ಅಕಾಡೆಮಿ ಮತ್ತು ಪ್ರಾಧಿಕಾರಕ್ಕೆ ಹಿಂದಿನ ಸರಕಾರಗಳಿಗಿಂತಲೂ ಹೆಚ್ಚಿನ ಆರ್ಥಿಕ ನೆರವು ನೀಡಿದೆ. ವರ್ಷಪೂರ್ತಿ ಸೃಜನಾತ್ಮಕ ಕಾರ್ಯಕ್ರಮಗಳು ನಡೆಯಬೇಕೆಂದು ಸೂಚಿಸಲಾಗಿತ್ತು. ಬೆರೆಳೆಣಿಕೆಯಷ್ಟು ಅಕಾಡೆಮಿಗಳು ಮಾತ್ರ ಸಕ್ರಿಯವಾಗಿವೆ. ಉಳಿದ ಅಕಾಡೆಮಿ ಮತ್ತು ಪ್ರಾಧಿಕಾರಗಳು ಇನ್ನು ಚುರುಕುಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕನ್ನಡ ನಾಡು-ನುಡಿ, ರಂಗಭೂಮಿ, ಕ್ರೀಡೆ, ಯುವಜನ ಮತ್ತು ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕೋವಿಡ್‍ನಂತಹ ಕ್ಲಿಷ್ಟಕರ ಸಂದರ್ಭದಲ್ಲೂ ಆರ್ಥಿಕ ನೆರವು ನೀಡಿದ್ದೇವೆ. ಪ್ರಾಧಿಕಾರಗಳು ಇದನ್ನ ಬಳಸಿಕೊಂಡು ಸೃಜನಾತ್ಮಕ ಹಾಗೂ ರಚನಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದ ಅವರು, ಜಿಡ್ಡುಗಟ್ಟಿದ್ದ ವ್ಯವಸ್ಥೆಗೆ ಹೊಸ ರೂಪ ನೀಡಬೇಕೆಂಬುದು ನನ್ನ ಗುರಿಯಾಗಿದೆ. ಕೇವಲ ನನ್ನೊಬ್ಬನಿಂದ ಮಾತ್ರ ಇದು ಸಾಧ್ಯವಿಲ್ಲ. ಪ್ರಾಧಿಕಾರ ಮತ್ತು ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಬದಲಾವಣೆ ಮಾಡಲು ಸಾಧ್ಯ ಎಂಬುದನ್ನು ಮನಗಾಣಬೇಕು ಎಂದರು.
ಅಧಿಕಾರಿಗಳಿಗೆ ತಾಕೀತು: ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳ ಕಾರ್ಯ ವೈಖರಿಗೆ ಸಚಿವ ರವಿ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭಾಷಾ ಬೆಳವಣಿಗೆಗೆ ಪೂರಕವಾಗಿ ಕಾರ್ಯಕ್ರಮಗಳನ್ನು ನಡೆಸಲು ಸರಕಾರ ಅನುದಾನ ನೀಡಿದ್ದರೂ ಯಾವ ಕಾರಣಕ್ಕೆ ಇನ್ನು ಖರ್ಚು ಮಾಡದೆ ಹಾಗೆ ಉಳಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ಡಿಸೆಂಬರ್ ಅಂತ್ಯಕ್ಕೆ ಇನ್ನು ಎರಡು ತಿಂಗಳು ಇದ್ದರೂ ಕೆಲವು ಅಕಾಡೆಮಿ ಮತ್ತು ಪ್ರಾಧಿಕಾರದಲ್ಲಿ ಅನುದಾನ ಖರ್ಚಾಗದೆ ಉಳಿಸಿಕೊಳ್ಳಲಾಗಿದೆ. ಯಾವ ಕಾರಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎಂದರು.
ಯಾವ ತಿಂಗಳಿನಲ್ಲಿ ಯಾವ ಕಾರ್ಯಕ್ರಮಕ್ಕೆ? ಎಷ್ಟು ಪ್ರಮಾಣದ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂಬುದು ನಿಮಗೆ ತಿಳಿದಿಲ್ಲವೇ? ಕೆಲವೇ ಕೆಲವು ಅಕಾಡೆಮಿಗಳಲ್ಲಿ ಅನುದಾನದ ಪ್ರಮಾಣ ನನ್ನ ನಿರೀಕ್ಷೆಗೆ ತಕ್ಕಂತೆ ಖರ್ಚಾಗಿದೆ. ಉಳಿದ ಅಕಾಡೆಮಿಗಳಲ್ಲಿ ಅನುದಾನ ಹಾಗೇ ಉಳಿಯಲು ಕಾರಣವಾದರೂ ಏನು ಎಂದ ಅವರು, ಮುಂದಿನ ಸಭೆಯಲ್ಲಿ ಕಾರಣಗಳನ್ನು ನೀಡದೆ ಅಕಾಡೆಮಿ ಹಾಗೂ ಪ್ರಾಧಿಕಾರಕ್ಕೆ ಅನುದಾನ ನಿಗದಿಪಡಿಸಲಾಗಿದೆಯೋ ಅಷ್ಟು ಖರ್ಚಾಗಬೇಕು. ನನಗೆ ಶೇ.100ರಷ್ಟು ಪ್ರಗತಿಯನ್ನು ನೀಡಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಸಾಹಿತ್ಯ ಅಕಾಡೆಮಿ, ಲಲಿತ ಕಲಾ ಅಕಾಡೆಮಿ, ನಾಟಕ ಅಕಾಡೆಮಿ, ಜಾನಪದ ಅಕಾಡೆಮಿ, ಶಿಲ್ಪಾ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಕೊಡವ ಸಾಹಿತ್ಯ ಅಕಾಡೆಮಿ, ಕೊಂಕಣ ಸಾಹಿತ್ಯ ಅಕಾಡೆಮಿ, ತುಳು ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಅಕಾಡೆಮಿ, ಅರೆಭಾಷೆ ಸಾಂಸ್ಕೃತಿಕ ಅಕಾಡೆಮಿ(ಮಡಿಕೇರಿ), ಬಯಲಾಟ ಅಕಾಡೆಮಿ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ರಂಗಾಯಣದ ಅಧ್ಯಕ್ಷರು ಸೇರಿದಂತೆ ಇಲಾಖೆಯ ಅಧಿಕಾರಿಗಳು, ಅಕಾಡೆಮಿ ಹಾಗೂ ಪ್ರಾಧಿಕಾರದ ಅಧ್ಯಕ್ಷರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
`ತಾನು ಸಚಿವರಾಗಿ ಇಲಾಖೆಯನ್ನು ಕೈಗೆತ್ತಿಕೊಂಡ ನಂತರ ಯಾವುದೇ ಜಾತಿ, ಧರ್ಮ, ಪ್ರಾದೇಶಿಕತೆ, ಪಕ್ಷಪಾತ ಮಾಡದೆ ಸಮಗ್ರ ಕರ್ನಾಟಕ ಕಲ್ಪನೆ ಇಟ್ಟುಕೊಂಡು ಕೆಲಸ ಮಾಡಿದ್ದೇನೆ. ನನ್ನ ಕೈಲಾದಷ್ಟು ಇಲಾಖೆಯಲ್ಲಿ ಹೊಸ-ಹೊಸ ಪ್ರಯೋಗಗಳಿಗೆ ಅವಕಾಶ ನೀಡಿದ್ದೇನೆ. ಮುಂದೆ ಬರುವವರಿಗೂ ಇದೇ ಸಹಕಾರ ಇರಲಿ'
-ಸಿ.ಟಿ.ರವಿ ಕನ್ನಡ ಮತ್ತು ಸಂಸ್ಕೃತಿ ಸಚಿವ