ಕಡೂರು ಪುರಸಭೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ
ಕಡೂರು, ನ.2: ಸುಮಾರು ಒಂದೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸೋಮವಾರ ನಡೆದಿದ್ದು, ನೂತನ ಅಧ್ಯಕ್ಷರಾಗಿ ಜೆಡಿಎಸ್‍ನ ಭಂಡಾರಿ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷೆಯಾಗಿ ಬಿಜೆಪಿಯ ವಿಜಯಾ ಚಿನ್ನರಾಜು ಆಯ್ಕೆಯಾಗಿದ್ದಾರೆ.
23 ಸದಸ್ಯ ಬಲದ ಕಡೂರು ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಸೋಮವಾರ ಪುರಸಭೆ ಸಂಭಾಂಗಣದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಭಂಡಾರಿ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಪಕ್ಷದ ಸೈಯ್ಯದ್ ಯಾಸೀನ್ ಉಮೇದುವಾರಿಕೆ ಸಲ್ಲಿಸಿದ್ದರು. ಉಪಾಧ್ಯಕ್ಷೆಯ ಸ್ಥಾನಕ್ಕೆ ಬಿಜೆಪಿಯ ವಿಜಯಾ ಚಿನ್ನರಾಜು ಹಾಗೂ ಕಾಂಗ್ರೆಸ್‍ನ ಜ್ಯೋತಿ ಆನಂದ್ ಉಮೇದುವಾರಿಕೆ ಸಲ್ಲಿಸಿದ್ದರು. ಮಧ್ಯಾಹ್ನ 1ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿ ಅಜ್ಜಂಪುರ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ನಾಮಪತ್ರಗಳು ಕ್ರಮಬದ್ದವಾಗಿದ್ದು, ಆಕಾಂಕ್ಷಿಗಳು ಇರುವುದರಿಂದ ಚುನಾವಣೆ ನಡೆಸುವುದಾಗಿ ಘೋಷಿಸಿದರು.
ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೊದಲೇ ಮೈತ್ರಿ ಏರ್ಪಟ್ಟಿದ್ದರಿಂದ ಚುನಾವಣೆ ಸಂದರ್ಭ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆ.ಡಿ.ಎಸ್‍ನ ಭಂಡಾರಿ ಶ್ರೀನಿವಾಸ್ ಅವರಿಗೆ ಅತೀ ಹೆಚ್ಚು 14 ಮತಗಳು ಹಾಗೂ ಶಾಸಕ ಬೆಳ್ಳಿ ಪ್ರಕಾಶ್ ಅವರ ಬೆಂಬಲ ಮತಗಳಿಸುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷೆ ವಿಜಯಾ ಅವರೂ 14 ಮತಗಳೊಂದಿಗೆ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು. ಇನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳು ತಲಾ 7 ಮತಗಳನ್ನು ಪಡೆದರು.
ಅಧ್ಯಕ್ಷರಾಗಿ ಆಯ್ಕೆಯಾಗಿ ಆಯ್ಕೆಯಾದ ಭಂಡಾರಿ ಶ್ರೀನಿವಾಸ ಮಾತನಾಡಿ, ಕಡೂರು ಪುರಸಭೆ 23 ವಾರ್ಡ್‍ಗಳ ಅಭಿವೃದ್ದಿಗೆ ಶ್ರಮಿಸುತ್ತೇನೆ. ಎಲ್ಲಾ ಸದಸ್ಯರು ಒಗ್ಗೂಡಿ ಪಟ್ಟಣದ ಅಭಿವೃದ್ದಿಗೆ ಶ್ರಮಿಸಬೇಕಾಗಿರುವುದು ಅಗತ್ಯ, ಶಾಸಕ ಬೆಳ್ಳಿ ಪ್ರಕಾಶ್ ಅವರೊಂದಿಗೆ ಪಟ್ಟಣದ ಅಭಿವೃದ್ದಿಗೆ ಕೈ ಜೋಡಿಸಿ, ಕೆಲಸ ಮಾಡುತ್ತೇನೆ. ಭದ್ರಾ ನೀರಿನ ಸಮಸ್ಯೆಯನ್ನು ಬಗೆಹರಿಸಿ ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡುತ್ತೆನೆ ಎಂದರು.