ಮಡಿಕೇರಿ: ಪೌತಿಖಾತೆ ಆಂದೋಲನಕ್ಕೆ ಚಾಲನೆ

Update: 2020-11-02 17:54 GMT

ಮಡಿಕೇರಿ, ನ.2 : ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಇವರನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಂದಾಯ ಇಲಾಖೆ ವತಿಯಿಂದ ಸೋಮವಾರಪೇಟೆ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಪೌತಿಖಾತೆ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆಲವು ಗ್ರಾಮ ಸಹಾಯಕರು ತಾವೇ ತಹಶೀಲ್ದಾರ್‍ರಂತೆ ವರ್ತಿಸುತ್ತಿದ್ದಾರೆ, ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ತೊಂದರೆ ನೀಡುವುದರೊಂದಿಗೆ ವಸೂಲಾತಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಅವರು, ಇಂತವರ ವಿರುದ್ಧ ದೂರುಗಳು ಬಂದಲ್ಲಿ ಗ್ರಾಮಲೆಕ್ಕಿಗರು, ಕಂದಾಯ ಪರಿವೀಕ್ಷಕರು ತಕ್ಷಣ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ಪೌತಿಖಾತೆ ಪ್ರಕರಣಗಳಲ್ಲಿ ಅಗತ್ಯ ದಾಖಲೆ ಪಡೆದು, ಸ್ಥಳ ಮಹಜರು ನಡೆಸಿ ತ್ವರಿತವಾಗಿ ಕಡತ ವಿಲೇವಾರಿ ಮಾಡಬೇಕು. ಅಲ್ಲದೇ ಕಂದಾಯ ಇಲಾಖೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ತಾ.ಪಂ. ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಮಾತನಾಡಿ, ಕಂದಾಯ ಇಲಾಖೆ ಸಿಬ್ಬಂದಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಪೌತಿಖಾತೆ ಆಂದೋಲನ ಯಶಸ್ವಿಯಾಗಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಮರಣ ದೃಡೀಕರಣ ಪಡೆಯಲು ಕಂದಾಯ ಇಲಾಖೆಯಿಂದ ವಂಶವೃಕ್ಷ ಪಡೆಯಬೇಕೆಂದು ನ್ಯಾಯಾಲಯ ತಿಳಿಸಿದೆ. ಆದರೆ ಕಂದಾಯ ಇಲಾಖೆ ಸಂಬಂಧಿಸಿದವರ ಮರಣ ದೃಢೀಕರಣ ಪತ್ರ ಬೇಕೆಂದು ಕೇಳುತ್ತಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ತಹಶೀಲ್ದಾರರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

 ತಹಶೀಲ್ದಾರ್ ಗೋವಿಂದರಾಜು, ಎಲ್ಲಾ ಶಿರಸ್ತೇದಾರ್, ಕಂದಾಯ ಪರಿವೀಕ್ಷಕರು, ಗ್ರಾಮಲೆಕ್ಕಿಗರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News