ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಸದಿರಲು ನಿರ್ಣಯ
ಬೆಂಗಳೂರು, ನ.2: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತಿದ್ದರೂ ಮುಂಜಾಗ್ರತಾ ಕ್ರಮವಾಗಿ ಈ ಬಾರಿಯ ಜನವರಿಯಲ್ಲಿ ನಡೆಯಬೇಕಿದ್ದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನೂ ನಡೆಸದಿರಲು ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘಗಳು ತೀರ್ಮಾನಿಸಿವೆ.
ಲಾಲ್ ಬಾಗ್‍ನಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ನಿರಂತರವಾಗಿ ವರ್ಷಕ್ಕೆರಡು ಬಾರಿ (ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ) ನಡೆಯುತ್ತಿದ್ದ ಐತಿಹಾಸಿಕ ಫಲಪುಷ್ಪ ಪ್ರದರ್ಶನ ಇದೇ ಮೊದಲ ಬಾರಿಗೆ ಕೋವಿಡ್‍ನಿಂದ ಎರಡು ಪ್ರದರ್ಶನಗಳೂ ಇಲ್ಲದಂತಾಗಿದೆ. ವಾರ್ಷಿಕ ಎರಡು ಬಾರಿ ಪ್ರದರ್ಶನ ನಡೆದರೂ ಪ್ರತಿ ಬಾರಿಯೂ ಹೊಸತನದೊಂದಿಗೆ ಲಕ್ಷಾಂತರ ಮಂದಿಯನ್ನು ರಂಜಿಸುತ್ತದೆ. ಜತೆಗೆ ದೇಶ, ವಿದೇಶಗಳ ಜನರನ್ನೂ ಆಕರ್ಷಿಸುತ್ತದೆ.
ಜನವರಿ(ಗಣರಾಜ್ಯೋತ್ಸವ)ಯಲ್ಲಿ ನಡೆಯಬೇಕಿರುವ ಫಲಪುಷ್ಪ ಪ್ರದರ್ಶನಕ್ಕೆ ಅಕ್ಟೋಬರ್ ನಿಂದಲೇ ಪೂರ್ವ ತಯಾರಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ತಯಾರಿಗಳಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಪದಾಧಿಕಾರಿಗಳ ಸಹಯೋಗದಲ್ಲಿ ಸಭೆ ನಡೆಸಿ ಸರಕಾರದಿಂದ ಅನುಮತಿ ಪಡೆಯಲು ನಿರ್ಧರಿಸಲಾಯಿತು.
ಆದರೆ ಸರಕಾರದಿಂದ ಅನುಮತಿ ಸಿಗುವುದೂ ಕಷ್ಟ, ಸಿಕ್ಕಿದರೂ ಪ್ರದರ್ಶನ ವೀಕ್ಷಣೆಗೆ ಜನ ಬರುವುದಿಲ್ಲ. ಹೀಗಾಗಿ ಸುಮಾರು ಒಂದು ಕೋಟಿ ಹಣ ಖರ್ಚು ಮಾಡಿ ವೀಕ್ಷಕರಿಲ್ಲದೆ ನಷ್ಟ ಮಾಡಿಕೊಳ್ಳುವುದು ಬೇಡ ಎಂದು ಇಂತಹ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಮೈಸೂರು ಉದ್ಯಾನ ಕಲಾಸಂಘದ ಖಜಾಂಚಿ ಕುಪ್ಪುಸ್ವಾಮಿ ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಪ್ರದರ್ಶನ ಮಾಡಿದೆವು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ವೀಕ್ಷಕರು ಆಗಮಿಸದೆ, 35 ಲಕ್ಷ ನಷ್ಟ ಅನುಭವಿಸಿದೆವು. ಕೋವಿಡ್‍ನಿಂದಾಗಿ ಆಗಸ್ಟ್ ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಸಲಿಲ್ಲ. ಈಗ ಗಣರಾಜ್ಯೋತ್ಸವ ಪ್ರದರ್ಶನವನ್ನು ನಡೆಸುತ್ತಿಲ್ಲ ಎಂದು ಕುಪ್ಪುಸ್ವಾಮಿ ತಿಳಿಸಿದರು.
ಪ್ರದರ್ಶನ ನಡೆಸುವುದಿದ್ದರೆ ಈ ವೇಳೆಗಾಗಲೇ ಉದ್ಯಾನದ ಆಕರ್ಷಣೆಯನ್ನು ಹೆಚ್ಚಿಸಲು ಅಲಂಕಾರಿಕ ಹೂವಿನ ಗಿಡಗಳನ್ನು ಬೆಳೆಸುವುದು, ನಾನಾ ಸ್ಪರ್ಧೆಗಳಿಗೆ ಸ್ಪರ್ಧಿಗಳ ಆಯ್ಕೆ ಸೇರಿದಂತೆ ನಾನಾ ತಯಾರಿಗಳನ್ನು ಮಾಡಿಕೊಳ್ಳಬೇಕಿತ್ತು. ಆದರೆ ಕೋವಿಡ್ ನಿಂದಾಗಿ ಈ ಬಾರಿ ಪ್ರದರ್ಶನ ನಡೆಸುತ್ತಿಲ್ಲ. ಹೀಗಾಗಿ ಯಾವುದೇ ತಯಾರಿಗಳೂ ನಡೆದಿಲ್ಲ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್ ತಿಳಿಸಿದರು.
ಪ್ರದರ್ಶನದ ಅಂಗವಾಗಿ ನಡೆಸುವ ಮಿನಿ ತೋಟಗಳ ಸ್ಪರ್ಧೆ, ಟೆರೇಸ್ ಗಾರ್ಡನ್ ಗಳ ಸ್ಪರ್ಧೆ, ಸಂಸ್ಥೆಗಳ ಗಾರ್ಡನ್ ಗಳ ಸ್ಪರ್ಧೆ, ಇಕೆಬಾನ, ಪೂರಕ ಕಲೆಗಳು ಹೀಗೆ ನಾನಾ ಸ್ಪರ್ಧೆಗಳಿಗೆ ಸ್ಪರ್ಧಿಗಳ ಹುಡುಕಾಟವೂ ಆರಂಭವಾಗಬೇಕಿತ್ತು. ಆದರೆ ಇದಾವುದೂ ನಡೆಯುತ್ತಿಲ್ಲ.