ಸರಕಾರಿ ಭೂಮಿಯನ್ನು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡುವುದನ್ನು ಸಹಿಸುವುದಿಲ್ಲ: ಹೈಕೋರ್ಟ್

Update: 2020-11-03 11:57 GMT

ಬೆಂಗಳೂರು, ನ.3: ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಿಸುತ್ತಿರುವ ಆರೋಪ ಸಂಬಂಧ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯಶೋಧರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ತಾಕೀತು ಮಾಡಿದೆ.

ಜವಾಬ್ದಾರಿಯುತ ಪಕ್ಷದ ಮುಖಂಡರೇ ಈ ರೀತಿ ವರ್ತಿಸಿದರೆ ಜನ ಸಾಮಾನ್ಯರು ಹೇಗೆ ನಡೆದುಕೊಳ್ಳಬೇಕು. ಸರಕಾರಿ ಭೂಮಿಯನ್ನು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳುವುದನ್ನು ನ್ಯಾಯಾಲಯ ಸಹಿಸುವುದಿಲ್ಲ. ಅವರಾಗಿಯೇ ತೆರವು ಮಾಡಿದರೆ ಉತ್ತಮ. ಇಲ್ಲದಿದ್ದರೆ ನ್ಯಾಯಾಲಯವೇ ತೆರವು ಮಾಡಲು ಆದೇಶಿಸಬೇಕಾಗುತ್ತದೆ. ಹಾಗೆಯೇ ದಂಡವನ್ನೂ ವಿಧಿಸಬೇಕಾಗುತ್ತದೆ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದೆ.

ಚಿತ್ರದುರ್ಗ ನಗರಸಭೆಗೆ ಸೇರಿದ ಜಾಗವನ್ನು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಡಿ.ಯಶೋಧರ ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡು ತಾತ್ಕಾಲಿಕ ವಾಣಿಜ್ಯ ಶೆಡ್ ಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಕಾಂಗ್ರೆಸ್ ಮುಖಂಡ ಓ. ರಾಜಣ್ಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. 

ಈ ವೇಳೆ ನಗರಸಭೆ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಶೆಡ್ ನಿರ್ಮಾಣ ಕಾಮಗಾರಿಗೆ ಪ್ರಾದೇಶಿಕ ಆಯುಕ್ತರು ತಡೆ ನೀಡಿದ್ದಾರೆ. ಹಾಗೆಯೇ ಅರ್ಜಿದಾರರು ಪ್ರಕರಣದಿಂದ ಹಿಂದೆ ಸರಿಯುವಂತೆ ಕಾಣುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪ್ರಾದೇಶಿಕ ಆಯುಕ್ತರು ಹೇಗೆ ತಡೆ ನೀಡಿದರು. ಯಾವ ನಿಯಮದಡಿ ಈ ಆದೇಶ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುವಂತೆ ಸರಕಾರಕ್ಕೆ ಸೂಚಿಸಿತು. ಅಲ್ಲದೇ ಅರ್ಜಿದಾರರು ಹಿಂದೆ ಸರಿದ ಕಾರಣಕ್ಕೆ ಪ್ರಕರಣವನ್ನು ಕೈಬಿಡುವುದಿಲ್ಲ. ಒಂದು ವೇಳೆ ಅರ್ಜಿದಾರರು ಹಿಂದೆ ಸರಿದರೆ ಪ್ರಕರಣವನ್ನು ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ಮುಂದುವರಿಸುವುದಾಗಿ ತಿಳಿಸಿತು.

ಇದೇ ವೇಳೆ ಪ್ರತಿವಾದಿಯಾಗಿರುವ ಚಿತ್ರದುರ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ ಅವರು ಶೆಡ್ ತೆರವು ಮಾಡುವ ಕುರಿತು ನಿಲುವು ತಿಳಿಸುವಂತೆ ಸೂಚಿಸಿ, ವಿಚಾರಣೆಯನ್ನು ನ.10ಕ್ಕೆ ಮುಂದೂಡಿತು.

ಪ್ರಕರಣವೇನು: ಚಿತ್ರದುರ್ಗ ಜಿಲ್ಲೆಯ ಮೇಡನಹಳ್ಳಿ ಗ್ರಾಮದ ಸರ್ವೇ ನಂಬರ್ 47/3 ರಲ್ಲಿನ 19 ಗುಂಟೆ ಜಾಗವು ಮೂಲತಃ ಚಿತ್ರದುರ್ಗ ನಗರಸಭೆಗೆ ಸೇರಿದೆ. ಹಿಂದೆ ಆ ಜಾಗದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯವಿತ್ತು. ಬೇರೆಡೆ ಹೊಸ ಕಾರ್ಯಾಲಯ ನಿರ್ಮಿಸಿದ್ದರಿಂದ ಈ ಸ್ಥಳವನ್ನು ತೆರವುಗೊಳಿಸಿತ್ತು. ನಂತರ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಡಿ.ಯಶೋಧರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ 19 ಗುಂಟೆ ಜಾಗವನ್ನು ಅನಧಿಕೃತವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಜೊತೆಗೆ, ತಮ್ಮ ಪ್ರಭಾವ ಬಳಸಿ ಖಾತೆಯಲ್ಲಿ ಜಾಗವು ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ ಎಂಬುದಾಗಿ ತಿದ್ದುಪಡಿ ಮಾಡಿದ್ದರು. ನಂತರ ಅದೇ ಜಾಗವು ಜೆಡಿಎಸ್ ಪಕ್ಷಕ್ಕೆ ಸೇರಿದೆ ಎಂಬುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದು, ಅಲ್ಲಿ ಅನಧಿಕೃತವಾಗಿ ವಾಣಿಜ್ಯ ಶೆಡ್ ನಿರ್ಮಿಸುತ್ತಿದ್ದಾರೆ. ಅದಕ್ಕೆ ನಗರಸಭೆ ನಕ್ಷೆ ಮಂಜೂರಾತಿ ನೀಡಿಲ್ಲ. ಹೀಗಾಗಿ, ಈ ಜಾಗದ ಸಂರಕ್ಷಣೆಗೆ ಮತ್ತು ಅನಧಿಕೃತವಾಗಿ ಶೆಡ್ ನಿರ್ಮಿಸಿರುವ ಯಶೋಧರ ವಿರುದ್ಧ ಕ್ರಮ ಜರುಗಿಸಲು ಸರಕಾರ ಮತ್ತು ನಗರಸಭೆ ಆಯುಕ್ತರಿಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News