ಶಿರಾ, ಆರ್‌ಆರ್ ನಗರ ಉಪಚುನಾವಣೆ ಶಾಂತಿಯುತ ಅಂತ್ಯ: ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

Update: 2020-11-03 15:53 GMT

ಬೆಂಗಳೂರು, ನ. 3: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಸೃಷ್ಟಿಸಿರುವ ಹಾಗೂ ಮುಂಬರುವ ವಿಧಾನಸಭಾ ಚುನಾವಣಾ ದಿಕ್ಸೂಚಿಯೆಂದು ವಿಶ್ಲೇಷಿಸಲಾಗುತ್ತಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ ಸೇರಿದಂತೆ ಸಣ್ಣಪುಟ್ಟ ಗೊಂದಲ, ರಾಜಕೀಯ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿ ಹೊರತುಪಡಿಸಿದರೆ ಬಹುತೇಕ ಶಾಂತಿಯುತ ಅಂತ್ಯಕಂಡಿದೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ನ.10ರ ಫಲಿತಾಂಶದತ್ತ ಎಲ್ಲರ ಚಿತ್ತನೆಟ್ಟಿದೆ.

ಮಂಗಳವಾರ ಬೆಳಗ್ಗೆ 7 ಗಂಟೆಯಿಂದಲೇ ಎರಡೂ ಕ್ಷೇತ್ರಗಳಲ್ಲಿ ಕೊರೋನ ವೈರಸ್ ಸೋಂಕಿನ ಆತಂಕದ ನಡುವೆಯೇ ಮತದಾನ ಆರಂಭವಾಯಿತು. ಶಿರಾ ಕ್ಷೇತ್ರದಲ್ಲಿ ಅತ್ಯಂತ ಉತ್ಸಾಹದಿಂದಲೇ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು ಶೇ.82.31ರಷ್ಟು ಹಾಗೂ ಆರ್.ಆರ್.ನಗರ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇ.45.25ರಷ್ಟು ಮತದಾನವಾಗಿದೆ ಎಂದು ಆಯೋಗ ತಿಳಿಸಿದೆ. ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರು ಸೋಲು-ಗೆಲುವಿನ ಲೆಕ್ಕಚಾರ ನಿರತರಾಗಿದ್ದಾರೆ.

ಬೆಳಗ್ಗೆಯಿಂದಲೆ ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲೆಡೆ ಮತದಾರರು ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮತಗಟ್ಟೆ ಬಳಿ ಪ್ರಚಾರ, ಮತದಾರರ ಮನವೋಲಿಕೆಗೆ ಕೇಸರಿ ಬಣ್ಣದ ಟೀ ಶರ್ಟ್, ಕೇಸರಿ ಬಣ್ಣದ ಮಾಸ್ಕ್ ಧರಿಸಿದ್ದಕ್ಕೆ ಆಕ್ಷೇಪ, ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಮತದಾರರನ್ನು ಸೆಳೆಯಲು ಹಣ ಹಂಚಿಕೆ ಆರೋಪಗಳನ್ನು ಹೊರತುಪಡಿಸಿದರೆ ಎರಡೂ ಕ್ಷೇತ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳ ವರದಿಗಳಿಲ್ಲ.

ಮಾರಕ ಕೋವಿಡ್-19 ಸೋಂಕಿನ ಆತಂಕದ ನಡುವೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಮತದಾರರಿಗೆ ಚುನಾವಣಾ ಆಯೋಗದಿಂದಲೇ ಮಾಸ್ಕ್ ಮತ್ತು ಗ್ಲೌಸ್ ವಿತರಣೆ ಮಾಡಲಾಗಿತ್ತು. ಸ್ಯಾನಿಟೈಸರ್ ನೀಡಿ ಜ್ವರ ತಪಾಸಣೆ ನಡೆಸಿಯೇ ಮತಗಟ್ಟೆ ಒಳಗೆ ಬಿಡಲಾಗುತ್ತಿತ್ತು. ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ಮೂಲಕ ಸುರಕ್ಷತೆ, ಸೂಕ್ತ ಮುನ್ನಚ್ಚರಿಕೆಯೊಂದಿಗೆ ಉಪಚುನಾವಣೆ ನಡೆಸಿದ್ದು ಮತದಾರರ ಮೆಚ್ಚುಗೆಗೆ ಪಾತ್ರವಾಗಿದೆ.

ಅಭ್ಯರ್ಥಿಗಳಲ್ಲಿ ತಳಮಳ: ಆರ್.ಆರ್.ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಮತ ತಮ್ಮ ಕ್ಷೇತ್ರದಲ್ಲಿ ಇಲ್ಲ. ಅವರನ್ನು ಹೊರತುಪಡಿಸಿ ಎರಡೂ ಕ್ಷೇತ್ರಗಳ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇಷ್ಟ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತಮ್ಮ ಹಕ್ಕು ಚಲಾಯಿಸಿದರು. ಮುನಿರತ್ನ, ಕುಸುಮಾ, ಕೃಷ್ಣಮೂರ್ತಿ, ರಾಜೇಶ್‍ಗೌಡ, ಟಿ.ಬಿ.ಜಯಚಂದ್ರ ಹಾಗೂ ಅಮ್ಮಾಜಮ್ಮ ಸಹಿತ ಒಟ್ಟು 31 ಘಟಾನುಘಟಿ ಅಭ್ಯರ್ಥಿಗಳು ಮತದಾನ ಮುಕ್ತಾಯದಿಂದ ನಿರಾಳರಾಗಿದ್ದಾರೆ. ಆದರೆ, ಮತ ಹಂಚಿಕೆ ಮತ್ತು ಸೋಲು-ಗೆಲುವಿನ ಲೆಕ್ಕಾಚಾರದಿಂದಾಗಿ ತಳಮಳದಲ್ಲಿದ್ದಾರೆ.

ನ.10ಕ್ಕೆ ಮತ ಎಣಿಕೆ: ಶಿರಾ ಕ್ಷೇತ್ರದಲ್ಲಿ-330, ಆರ್.ಆರ್.ನಗರದಲ್ಲಿ-678 ಸೇರಿದಂತೆ ಒಟ್ಟು 1,008 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಗ್ಗೆ 7ರಿಂದ 5ಗಂಟೆಯ ವರೆಗೆ ಮತದಾನ ನಡೆದಿದ್ದು, ಸಂಜೆ 5ರಿಂದ 6ಗಂಟೆಯ ವರೆಗೆ ಕೋವಿಡ್-19 ಸೋಂಕಿತರು ಮತ್ತು ಐಸೋಲೇಷನ್‍ನಲ್ಲಿರುವ ಮತದಾರರಿಗೆ ಅವಕಾಶ ಕಲ್ಪಿಸಲಾಗಿತ್ತು. ಶಿರಾ ಕ್ಷೇತ್ರದ ಮತಯಂತ್ರಗಳನ್ನು ಶಿರಾ ಪಟ್ಟಣದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ. ತುಮಕೂರಿನ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿರಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರದ ಮತಯಂತ್ರಗಳನ್ನು ಕ್ಷೇತ್ರ ವ್ಯಾಪ್ತಿಯ ಹಲಗೇವಡೇರಹಳ್ಳಿಯ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದ್ದು, ಮತ ಎಣಿಕೆ ಕಾರ್ಯವೂ ಅದೇ ಶಾಲೆಯಲ್ಲೆ ನಡೆಯಲಿದೆ. ನ.10ರ ಬೆಳಗ್ಗೆ 8ಗಂಟೆಯಿಂದಲೇ ಎರಡೂ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮಧ್ಯಾಹ್ನ 12ಗಂಟೆಯ ಸುಮಾರಿಗೆ ಉಪಚುನಾವಣೆ ಫಲಿತಾಂಶ ಬಹಿರಂಗಗೊಳ್ಳುವ ಸಾಧ್ಯತೆಗಳಿದ್ದು, ಎಲ್ಲರ ಚಿತ್ತ ಫಲಿತಾಂಶದ ದಿನದತ್ತ ನೆಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News