ಕಾರಿನಲ್ಲಿ ಪ್ರಯಾಣಿಸುವ ಒಬ್ಬಂಟಿಗೆ ಮಾಸ್ಕ್ ಕಡ್ಡಾಯವಲ್ಲ: ಬಿಬಿಎಂಪಿ ಕೊರೋನ ನಿಯಮ ಪರಿಷ್ಕರಣೆ

Update: 2020-11-03 16:44 GMT

ಬೆಂಗಳೂರು, ನ.3: ಕಾರಿನಲ್ಲಿ ಪ್ರಯಾಣಿಸುವ ಓರ್ವ ವ್ಯಕ್ತಿ ಮಾಸ್ಕ್ ಧರಿಸುವ ಅಗತ್ಯವಿಲ್ಲ ಹಾಗೂ ಆ ವ್ಯಕ್ತಿಗೆ ದಂಡ ವಿಧಿಸುವಂತಿಲ್ಲ ಎಂದು ಕೋವಿಡ್ ನಿಯಮವನ್ನು ಪರಿಷ್ಕರಣೆಗೊಳಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

ಕಳೆದ ಅ.27 ರಂದು ಕೋವಿಡ್ ನಿಯಮದ ಕುರಿತು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು, ಕಾರಿನಲ್ಲಿ ಒಬ್ಬ ವ್ಯಕ್ತಿ ಪ್ರಯಾಣ ಮಾಡುವಾಗ ಮತ್ತು ಬೈಕ್‍ನಲ್ಲಿ ಹಿಂಬದಿ ಸವಾರ ಇಲ್ಲದಿದ್ದರೂ ವಾಹನ ಚಲಾಯಿಸುವವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಆದೇಶ ಹೊರಡಿಸಿದ್ದರು. ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಸ್ಪಷ್ಟೀಕರಣ ನೀಡುವಂತೆ ಅ.29 ರಂದು ಪತ್ರದ ಮೂಲಕ ಮನವಿ ಮಾಡಿದ್ದರು.

ಕೆಂದ್ರ ಸರಕಾರದ ಅರೋಗ್ಯ ಮಂತ್ರಾಲಯ ಮತ್ತು ಆರೋಗ್ಯ ತಜ್ಞರೊಂದಿಗೆ ನ.1 ರಂದು ಕೋವಿಡ್ ಕುರಿತು ಸಭೆ ನಡೆದಿದ್ದು, ಈ ವೇಳೆ ಕಾರಿನಲ್ಲಿ ಒಬ್ಬ ವ್ಯಕ್ತಿ ಕಿಟಕಿ ಗಾಜು ಮುಚ್ಚಿಕೊಂಡು ಸಂಚಾರ ಮಾಡುತ್ತಿದ್ದಲ್ಲಿ ಅವರಿಗೆ ದಂಡ ವಿಧಿಸಬಾರದು ಎಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಾರಿನಲ್ಲಿ ಒಬ್ಬಂಟಿ ಸವಾರರು ಮಾಸ್ಕ್ ಧರಿಸದೇ ಪ್ರಯಾಣ ಮಾಡಬಹುದು. ಆದರೆ, ಒಬ್ಬರಿಗಿಂತ ಹೆಚ್ಚಿನ ಜನರಿದ್ದಲ್ಲಿ ಮತ್ತು ಬೈಕ್ ಸವಾರ ಅಥವಾ ಹಿಂಬದಿ ಸವಾರ ಇಲ್ಲದಿದ್ದಾಗಲೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News