×
Ad

ಶಾಲೆ ಪ್ರಾರಂಭಿಸುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಿ: ಶಿಕ್ಷಣ ತಜ್ಞ ನಿರಂಜನಾರಾಧ್ಯ ಒತ್ತಾಯ

Update: 2020-11-03 23:32 IST

ಬೆಂಗಳೂರು, ನ.3: ರಾಜ್ಯ ಸರಕಾರ ಶಾಲೆಗಳನ್ನು ಪ್ರಾರಂಭಿಸುವ ಕುರಿತು ಶೀಘ್ರ ನಿರ್ಧಾರ ಪ್ರಕಟಿಸಬೇಕು ಎಂದು ಶಿಕ್ಷಣ ತಜ್ಞ ಪಿ.ವಿ.ನಿರಂಜನಾರಾಧ್ಯ ಒತ್ತಾಯಿಸಿದ್ದಾರೆ.

ಶಾಲೆ ಪ್ರಾರಂಭ ಮಾಡುವ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಮಕ್ಕಳ ದೈಹಿಕ, ಮಾನಸಿಕ ಮತ್ತು ಶೈಕ್ಷಣಿಕ ವಿಷಯದಲ್ಲಿ ಹಿನ್ನೆಡೆ ಉಂಟಾಗಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದು ಗಾಢವಾದ ನಕಾರಾತ್ಮಕ ಪರಿಣಾಮ ಬೀರಲಿದೆ. ಸರಕಾರಿ ಶಾಲೆಗಳು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಮಕ್ಕಳ ಕಲಿಕೆಯ ಜೊತೆ ಜೊತೆಗೆ ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕವಾದ ಬಿಸಿ ಹಾಲು, ಬಿಸಿಯೂಟ, ರೋಗ ನಿರೋಧಕ ವಿಟಮಿನ್ ಮಾತ್ರೆ, ಆರೋಗ್ಯ ತಪಾಸಣೆ ಇತ್ಯಾದಿ ಸೌಲಭ್ಯಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ.

ಶಾಲೆಗಳು ಒಂದು ಬಗೆಯ ಸಾಮಾಜಿಕ ನ್ಯಾಯದ ಕೇಂದ್ರಗಳು ಸಹ ಆಗಿರುತ್ತವೆ. ಅವು ಅತ್ಯಂತ ಬಡ ಕುಟುಂಬಗಳಿಗೆ ಹಲವು ರೀತಿಯಲ್ಲಿ ಆಸರೆಯಾಗಿರುತ್ತವೆ. ಕೋವಿಡ್ 19ರ ಈ  ಸಂಕಷ್ಟದ ಸಂದರ್ಭದಲ್ಲಿ ಇದು ಅತ್ಯಂತ ಮಹತ್ವದ ವಿಷಯವಾಗಿದೆ ಹಾಗು ಸರ್ಕಾರ ಈ ವಿಷಯದಲ್ಲಿ ತೀರ್ಮಾನಿಸುವುದು ಬಡವರ್ಗದ ಈ ಸಮುದಾಯಕ್ಕೆ ನಿರ್ಣಾಯಕ ತೀರ್ಮಾನವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವರು ಶೀಘ್ರವಾಗಿ ಒಂದು ಒಮ್ಮತದ ತೀರ್ಮಾನಕ್ಕೆ ಬರಬೇಕೆಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News