ಉತ್ತರ ಪ್ರದೇಶ ಮಾದರಿಯಲ್ಲೆ ಲವ್ ಜಿಹಾದ್ ತಡೆಗೆ ರಾಜ್ಯದಲ್ಲಿ ಕಾನೂನು: ಸಚಿವ ಆರ್.ಅಶೋಕ್

Update: 2020-11-04 10:55 GMT

ಬೆಂಗಳೂರು, ನ .4: ಉತ್ತರ ಪ್ರದೇಶ ಮಾದರಿಯಲ್ಲಿ `ಮದುವೆಗಾಗಿ ಮತಾಂತರ' ತಡೆಯುವ ಕಾನೂನು ಕರ್ನಾಟಕ ರಾಜ್ಯದಲ್ಲೂ ಜಾರಿಯಾಗಬೇಕು. ಆ ನಿಟ್ಟಿನಲ್ಲಿ ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲವ್ ಜಿಹಾದ್ ಹೆಸರಿನಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ವಂಚಿಸುವ ಕೆಲಸ ನಡೆಯುತ್ತಿದೆ. ಈ ಲವ್ ಜಿಹಾದ್ ರಾಜ್ಯದಿಂದ ತೊಲಗಬೇಕು. ವಿವಾಹಕ್ಕಾಗಿ ಮತಾಂತರ ಆಗುವುದನ್ನು ತಡೆಯಲು ಉತ್ತರ ಪ್ರದೇಶ ರಾಜ್ಯದಲ್ಲಿ ಕಾನೂನು ಜಾರಿಯಾಗಿದೆ. ಕರ್ನಾಟಕದಲ್ಲೂ ಇದೇ ರೀತಿಯ ಕಾನೂನನ್ನು ಜಾರಿಗೊಳಿಸಿ ಅಮಾಯಕ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಪಾಶದಿಂದ ಮುಕ್ತಿಗೊಳಿಸಬೇಕು. ಆ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

`ಲವ್ ಜಿಹಾದ್'ನ ಹಿಂದೆ ಮತಾಂತರದ ಉದ್ದೇಶ ಇರುತ್ತದೆ. ಇದೆಲ್ಲದ್ದಕ್ಕೂ ತಡೆ ಹಾಕಬೇಕು. ಪ್ರೀತಿ ನೆಪದಲ್ಲಿ ಮದುವೆಯಾಗಿ ಮತಾಂತರ ಮಾಡಲೆಂದೇ ಯುವಕರಿಗೆ ತರಬೇತಿ ನೀಡುವ, ಬೈಕ್, ಬಟ್ಟೆ ಕೊಡಿಸುವ ಗುಂಪುಗಳು ಕರ್ನಾಟಕ ರಾಜ್ಯದಲ್ಲಿ ಸಕ್ರಿಯವಾಗಿವೆ. ಲವ್ ಜಿಹಾದ್ ಗೆ ಬಲಿಯಾಗಿ ಬದುಕು ಕಳೆದುಕೊಂಡ ಹೆಣ್ಣು ಮಕ್ಕಳ ರಕ್ಷಣೆಗೆ ಕಾನೂನಿನ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ವಲಸೆ ಕಾರಣ: ಆರ್.ಆರ್.ನಗರದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸ್ವಗ್ರಾಮಗಳಿಗೆ ಮರು ವಲಸೆ ಹೋಗಿದ್ದರು. ಹೀಗಾಗಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಇಲ್ಲಿ ಕಾಂಗ್ರೆಸ್ ಮತ ಬ್ಯಾಂಕ್ ಎಂದು ನಂಬಿದ್ದವರು ಮತ ಚಲಾವಣೆ ಮಾಡಿಲ್ಲ. ಆದರೆ, ಸ್ಥಳೀಯರು ಹಾಗೂ ಬಿಜೆಪಿಯ ಪಾರಂಪರಿಕ ಮತದಾರರೆಲ್ಲಾ ಬಂದು ಮತ ಹಾಕಿದ್ದಾರೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿ ಕನಿಷ್ಠ 30 ಸಾವಿರ ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅತ್ತೆ-ಸೊಸೆ ಸರಿಹೋಗಲಿ: ಸೊಸೆ ನನಗೆ ಮಗಳಿದ್ದಂತೆ ಎಂದು ಡಿ.ಕೆ.ರವಿ ತಾಯಿ ಹೇಳಿಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ್, ಡಿ.ಕೆ.ರವಿಯವರ ತಾಯಿಯಿಂದ ಹೇಳಿಕೆ ಕೊಡಿಸಿದ್ದು ಡಿ.ಕೆ.ಸಹೋದರರ ಗಿಮಿಕ್ ಅಷ್ಟೇ. ಡಿ.ಕೆ.ರವಿಯವರ ತಾಯಿ ಬೇಕಾದರೆ ಮಾಧ್ಯಮಗಳ ಮುಂದೆ ಬಂದು ಹೇಳಬೇಕಾಗಿತ್ತು. ಆದರೂ, ಅವರ ಸಂಸಾರ ಸರಿಹೋಗಲಿ. ಕಿತ್ತಾಡಿಕೊಂಡಿರುವ ಅತ್ತೆ-ಸೊಸೆ ಸರಿಹೋಗಲಿ ಎಂದು ನಾವು ಬಯಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News