ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ: ಗೃಹ ಸಚಿವ ಬೊಮ್ಮಾಯಿ

Update: 2020-11-04 10:56 GMT

ಬೆಂಗಳೂರು, ನ.4: ಮತಾಂತರ ನಿಷೇಧ ಕಾಯ್ದೆ ಜಾರಿ ಸಂಬಂಧ ಕಾನೂನು ತಜ್ಞರ ಜೊತೆ ಚರ್ಚೆ ನಡೆಸಲು ಮುಂದಾಗಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರ ಎಲ್ಲ ಸಲಹೆ ಸೂಚನೆ ಆಧಾರದಲ್ಲಿ ಮತಾಂತರ ತಡೆಗೆ ಕಾನೂನು ಪ್ರಕ್ರಿಯೆ ಜಾರಿಗೊಳಿಸುವ ನಿಟ್ಟಿನಲ್ಲಿ ಸರಕಾರ ಮುಂದುವರಿಯಲಿದೆ ಎಂದು ನುಡಿದರು.

ಇಂತಹ ಕಾನೂನು ಬಗ್ಗೆ ಹಲವು ವರ್ಷಗಳಿಂದಲೂ ಚರ್ಚೆ ಆಗುತ್ತಿದ್ದು, ಪ್ರತೀ ಪ್ರಕರಣ ಬೆಳಕಿಗೆ ಬಂದಾಗ ಲವ್ ಜಿಹಾದ್ ವಿಷಯ ಚರ್ಚೆಗೆ ಬರುತ್ತದೆ ಎಂದ ಅವರು, ಹೈಕೋರ್ಟಿನ ವ್ಯಾಖ್ಯಾನದ ಬಳಿಕ ಕಾನೂನು ಪ್ರಕ್ರಿಯೆಯ ಚಿಂತನೆ ಆರಂಭವಾಗಿದೆ ಎಂದರು.

ಬೇರೆ ರಾಜ್ಯಗಳಲ್ಲಿ ಏನೇನು ಮಾಡುತ್ತಾರೆಂಬುದನ್ನು ನೋಡಿಕೊಂಡು, ನಂತರ ನಾವು ನಮ್ಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಲವ್ ಜಿಹಾದ್ ಮಾಡುವ ದೃಷ್ಟಿಯಿಂದ ಕೆಲವು ಶಕ್ತಿಗಳು ಸಂಘಟಿತವಾಗಿ ಯುವಕರನ್ನು ದಾರಿ ತಪ್ಪಿಸುವ ಕಾರ್ಯಾಚರಣೆ ಮಾಡುತ್ತಿವೆ. ಲವ್ ಜಿಹಾದ್ ಹೆಸರಿನಿಂದ ಪರಿವರ್ತನೆ ಸರಿಯಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಕೂಡಾ ಹೇಳಿದೆ ಎಂದು ತಿಳಿಸಿದರು.

ಮತಾಂತರ, ಲವ್ ಜಿಹಾದ್ ಸಂಬಂಧ ವಿಶೇಷ ಕಾನೂನು ಆಗಬೇಕೆಂದು ಕೆಲವರು ಚಿಂತನೆ ಆರಂಭಿಸಿದ್ದಾರೆ. ಕೆಲ ರಾಜ್ಯಗಳು ಘೋಷಣೆಯನ್ನು ಮಾಡಿದ್ದು, ನಾವು ಸಹ ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ರಚನೆಯಾಗಬೇಕೆಂಬ ಚಿಂತನೆಯ ಚರ್ಚೆಯಲ್ಲಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News