×
Ad

ರಾಜ್ಯದಲ್ಲಿರುವುದು ಕಾಂಗ್ರೆಸ್-ಬಿಜೆಪಿ ಸರಕಾರ ಎಂದ ಡಿ.ಕೆ.ಶಿವಕುಮಾರ್

Update: 2020-11-04 16:40 IST

ಬೆಂಗಳೂರು, ನ. 4: `ರಾಜ್ಯದಲ್ಲಿ ಪ್ರಸ್ತುತ ಇರುವುದು ಬಿಜೆಪಿ ಸರಕಾರವಲ್ಲ, ಬದಲಿಗೆ ಕಾಂಗ್ರೆಸ್-ಬಿಜೆಪಿ ಸರಕಾರ' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬುಧವಾರ ಇಲ್ಲಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರಕಾರವಲ್ಲ, ಕಾಂಗ್ರೆಸ್-ಬಿಜೆಪಿ ಸರಕಾರ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದರು. ಆರ್.ಆರ್.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪಕ್ಷ ಸೇರ್ಪಡೆ ವೇಳೆ `ಕೈ' ನಾಯಕರೊಬ್ಬರು `ಬಿಜೆಪಿಯಲ್ಲಿ ಇಂಧನ ಖಾತೆ ಸಚಿವನಾಗಬೇಕು' ಎಂದು ಹಾರೈಸಿದ್ದಾರೆಂಬ ಪ್ರಶ್ನೆಗೆ ಮೇಲಿನಂತೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.

ಮತದಾರರ ಮೇಲೆ ವಿಶ್ವಾಸವಿದೆ: ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸುಶಿಕ್ಷಿತ ಮತದಾರರು ರಾಜ್ಯದಲ್ಲಿನ ಪ್ರಸಕ್ತ ಪರಿಸ್ಥಿತಿ ನೋಡಿ ಮತ ಹಾಕಲು ಹಿಂಜರಿದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಾಕಷ್ಟು ಜನರು ಮನವಿ ಮಾಡಿದರೂ ಮತದಾನ ಮಾಡಿಲ್ಲ. ಶಿರಾ ಹಾಗೂ ಆರ್.ಆರ್.ನಗರ ಕ್ಷೇತ್ರಗಳ ಮತದಾರರ ಮೇಲೆ ವಿಶ್ವಾಸ ಇದೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಅನ್ಯ ಪಕ್ಷಗಳ ಮುಖಂಡರ ಸಹಕಾರ: ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಜೊತೆಗೆ ಬೇರೆ ಪಕ್ಷಗಳ ಕಾರ್ಯಕರ್ತರೂ ಸಹಾಯ ಮಾಡಿದ್ದಾರೆ. ಆದರೆ, ಅವರು ಯಾರು ಎಂದು ಹೇಳುವುದಿಲ್ಲ. ಅವರು ಸೇರಿದಂತೆ ನಮ್ಮ ಪಕ್ಷದ ಎಲ್ಲ ಹಿರಿಯ-ಕಿರಿಯ ಮುಖಂಡರು ಹಾಗೂ ಎಲ್ಲ ಕಾರ್ಯಕರ್ತರಿಗೆ ಪಕ್ಷದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಆಯೋಗ ಗಮನಿಸಿದೆ: ಎರಡು ಕ್ಷೇತ್ರದಲ್ಲಿ ಚುನಾವಣಾ ಆಯೋಗ ನಾವು ಕೊಟ್ಟ ದೂರುಗಳ ಬಗ್ಗೆ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಕೆಲವೊಂದು ಕ್ರಮ ಕೈಗೊಂಡಿದ್ದಾರೆ. ಚುನಾವಣಾ ಅಕ್ರಮಗಳ ಬಗ್ಗೆ ನಾವು ಕೊಟ್ಟ ದೂರನ್ನು ಸೂಕ್ತ ರೀತಿಯಲ್ಲಿ ಗಮನಿಸಿದ್ದಾರೆ. ಅದರ ಪರಿಣಾಮ ಏನು ಎಂದು ಗೊತ್ತಿಲ್ಲ. ತ್ವರಿತಗತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ನಮ್ದು ಒಂದೇ ಟೇಕ್: ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ನಾಟಕ(ಡ್ರಾಮಾ) ಹಾಗೂ ಸಿನಿಮಾ ಮಾಡುತ್ತಾರೆ. ಆದರೆ, ನಾವು ಮಾಡಲ್ಲ. ಹೀಗಾಗಿ ನಮ್ಮದು ಒಂದೇ ಟೇಕ್, ನಮ್ಮಲ್ಲಿ ಯಾವುದೇ ರೀತಿಯ ಕಟ್ ಆಂಡ್ ಪೇಸ್ಟ್ ಇಲ್ಲ. ಇದೇ ನಮಗೂ ಮುನಿರತ್ನಗೂ ಇರುವ ವ್ಯತ್ಯಾಸ ಎಂದು ಡಿ.ಕೆ.ಶಿವಕುಮಾರ್, ಮುನಿರತ್ನ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ರಾಜ್ಯ ಹಾಗೂ ಕೇಂದ್ರ ಸರಕಾರಗಳ ಕಾರ್ಯ ವೈಖರಿಗೆ ಬೇಸತ್ತು ಹೆಚ್ಚಿನ ಸಂಖ್ಯೆಯಲ್ಲಿ ಮತದಾರ ಮತದಾನ ಮಾಡಿಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸದಿರುವುದು, ಜನಪರವಾದ ಕೆಲಸ ಮಾಡದೇ ಇರುವುದು ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ಹೆಚ್ಚಿನ ಮತದಾರ ಮತ ಹಾಕಲು ಬಂದಿಲ್ಲ. ನಗರದಲ್ಲಿ ವಾಸ ಮಾಡುತ್ತಿರುವ ವಿದ್ಯಾವಂತ ಮತದಾರರು ಈ ರಾಜಕೀಯ ವಿದ್ಯಮಾನಗಳನ್ನು ನೋಡಿ, ನಾವು ಯಾವ ಕಾರಣಕ್ಕೆ ಮತ ಹಾಕಬೇಕೆಂದು ಬೇಸರಗೊಂಡಿದ್ದಾರೆ

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News