ಕೋವಿಡ್ ಸಂಕಷ್ಟದ ನಡುವೆ ಜನತೆಗೆ ಮತ್ತೊಂದು ಶಾಕ್: ವಿದ್ಯುತ್ ದರ ಏರಿಕೆ ಮಾಡಿದ ರಾಜ್ಯ ಸರಕಾರ
ಬೆಂಗಳೂರು, ನ. 4: ಕೋವಿಡ್ ಸಂಕಷ್ಟ, ಎರಡೂ ಕ್ಷೇತ್ರಗಳ ಉಪ ಚುನಾವಣೆ ಮುಕ್ತಾಯದ ಬೆನ್ನಲ್ಲೆ ರಾಜ್ಯ ಸರಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಗೆ ಶಾಕ್ ನೀಡಿದೆ.
ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ(ಬೆಸ್ಕಾಂ) ಸೇರಿದಂತೆ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಸಂಸ್ಥೆಗಳು ಬೇಡಿಕೆಯನ್ನು ಪರಿಗಣಿಸಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‍ಸಿ) ಪ್ರತಿ ಯೂನಿಟ್‍ಗೆ ಒಟ್ಟು ಅಂದಾಜು 40 ಪೈಸೆಯಷ್ಟು ದರ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಕೋವಿಡ್-19 ಸೋಂಕು ತಡೆಗಟ್ಟಲು ಘೋಷಿಸಿದ್ದ ಸುದೀರ್ಘ ಲಾಕ್‍ಡೌನ್, ಅನಂತರ ಉಂಟಾಗಿದ್ದ ಆರ್ಥಿಕ ಸಂಕಷ್ಟ ಹಾಗೂ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆ ನೀತಿ ಸಂಹಿತೆ ಕಾರಣ ವಿದ್ಯುತ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ, ಇದೀಗ ಕೊರೋನ ಸೋಂಕಿನ ಸಂಕಷ್ಟದಿಂದ ಜನ ಸಾಮಾನ್ಯರು ಹೊರಬರುವ ಮೊದಲೇ ಸರಕಾರ ವಿದ್ಯುತ್ ದರ ಏರಿಕೆ ಪ್ರಕಟಿಸಿದೆ.
2020ರ ನವೆಂಬರ್ 1ರಿಂದಲೇ ಪರಿಷ್ಕೃತ ವಿದ್ಯುತ್ ದರ ಅನ್ವಯವಾಗಲಿದೆ. ಪ್ರತಿ ವರ್ಷ ಎಪ್ರಿಲ್ ತಿಂಗಳಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ, ಈ ವರ್ಷ ಮಾರ್ಚ್ ತಿಂಗಳ ಕೊನೆಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದರ ಪರಿಣಾಮ ವಿದ್ಯುತ್ ದರ ಏರಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಸೋಂಕು ಕಡಿಮೆಯಾಗುತ್ತಿದ್ದು ವಿದ್ಯುತ್ ದರ ಏರಿಕೆ ಘೋಷಣೆ ಮಾಡಲಾಗಿದೆ.
ವಿದ್ಯುತ್ ಪೂರೈಕೆ ನಿಗಮಗಳ ಆರ್ಥಿಕ ಹೊರೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡಲಾಗಿದ್ದು, ಮುಂದಿನ ಐದು ತಿಂಗಳು(2021ರ ಮಾರ್ಚ್) ನೂತನ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅನಂತರ ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತೊಮ್ಮೆ ವಿದ್ಯುತ್ ದರ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಕೆಇಆರ್‍ಸಿ ಮುನ್ಸೂಚನೆಯನ್ನು ನೀಡಿದೆ.
ವಿದ್ಯುತ್ ದರ ಪ್ರತಿ ಯೂನಿಟ್‍ಗೆ 1 ರೂ. 96 ಪೈಸೆ ಹೆಚ್ಚಳ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸರಕಾರಕ್ಕೆ ಮನವಿ ಮಾಡಿತ್ತು. ಆದರೆ, ಸರಕಾರ ಅಂತಿಮವಾಗಿ ಪ್ರತಿ ಯೂನಿಟ್‍ಗೆ 40 ಪೈಸೆ ಏರಿಕೆ ಮಾಡಲು ಅನುಮೋದನೆ ನೀಡಿದ್ದು, ಪರಿಷ್ಕೃತ ದರ ಏರಿಕೆ ಮಾಡಿ ಬುಧವಾರ ಅಧಿಕೃತವಾಗಿ ಕೆಇಆರ್‍ಸಿ ಆದೇಶವನ್ನು ಹೊರಡಿಸಿದೆ.