ಬೆಂಗಳೂರು ಗಲಭೆ ಪ್ರಕರಣಕ್ಕೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಣೆ

Update: 2020-11-04 14:35 GMT

ಬೆಂಗಳೂರು, ನ.4: ಡಿ.ಜೆ.-ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿದ್ದು, ಮಾಜಿ ಮೇಯರ್ ಸಂಪತ್‍ರಾಜ್‍ಗೆ ಭಾರೀ ಹಿನ್ನಡೆಯಾಗಿದೆ.

ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ತಡೆಯಾಜ್ಞೆ ಕೋರಿ ಮಾಜಿ ಮೇಯರ್ ಸಂಪತ್‍ರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು.

ಸಿಸಿಬಿ ಪರ ವಾದಿಸಿದ ಎಸ್‍ಪಿಪಿ ಪ್ರಸನ್ನಕುಮಾರ್ ಅವರು, ಮಾಜಿ ಮೇಯರ್ ಸಂಪತ್‍ರಾಜ್ ಅವರು ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಕೊರೋನ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಾಗಿದ್ದರು. ಒಂದೂವರೆ ತಿಂಗಳು ಕಳೆದರೂ ಗುಣಮುಖ ಆಗಿರುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ಅಲ್ಲದೆ, ಕೊರೋನ ಮತ್ತೆ ಬಂದಿದೆ ಎಂದೂ ನೆಪ ಹೇಳಿದ್ದರು ಎಂದು ಪೀಠಕ್ಕೆ ತಿಳಿಸಿದರು.

ಇತ್ತೀಚಿಗೆ ಪೊಲೀಸರಿಗೂ ಮಾಹಿತಿ ನೀಡದೆ, ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಆಗಿದ್ದಾರೆ. ಈ ಬಗ್ಗೆ ಆಸ್ಪತ್ರೆಯವರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಈಗ ಸಂಪತ್‍ರಾಜ್ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ, ಪ್ರಕರಣಕ್ಕೆ ತಡೆ ನೀಡದಂತೆ ಪೀಠಕ್ಕೆ ಮನವಿ ಮಾಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಪ್ರಕರಣಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. 

ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ನೀಡಿದ ಹೇಳಿಕೆ ಮೇರೆಗೆ ಪೊಲೀಸರು ಸಂಪತ್ ರಾಜ್‍ನನ್ನು ಆರೋಪಿಯಾಗಿ ಪರಿಗಣಿಸಿದ್ದಾರೆ. 12ಕ್ಕೂ ಹೆಚ್ಚು ಆರೋಪಿಗಳು ಸಂಪತ್ ರಾಜ್ ಆಪ್ತರ ಸೂಚನೆ ಮೇರೆಗೆ ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಮೇಲೆ ದಾಳಿ ನಡೆಸಿದ ಆರೋಪವಿದೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಬಂಧಿಸುವ ಭಯಕ್ಕೆ ಒಳಗಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರು ಪ್ರಕರಣಕ್ಕೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News