ಲವ್ ಜಿಹಾದ್ ಹೆಸರಲ್ಲಿ ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಮತಾಂತರ: ಶೋಭಾ ಕರಂದ್ಲಾಜೆ

Update: 2020-11-04 14:58 GMT

ಚಿಕ್ಕಮಗಳೂರು, ನ.4: ದೇಶಾದ್ಯಂತ ಲವ್ ಜಿಹಾದ್ ಹೆಸರಿನಲ್ಲಿ ದೊಡ್ಡ ಮಟ್ಟದ ಮತಾಂತರ ನಡೆಯುತ್ತಿದೆ. ಲವ್ ಜಿಹಾದ್ ಎಂಬುದು ಭಯೋತ್ಪಾದಕತೆಯ ಇನ್ನೊಂದು ಮುಖವಾಗಿದೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಜಾರಿಮಾಡಲು ಸಾಧ್ಯವಿರುವ ಮತಾಂತರ ಕಾಯ್ದೆಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸುವ ಅನಿವಾರ್ಯತೆ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಒಂದು ಕೋಮಿನ ಜನಸಂಖ್ಯೆಯನ್ನು ಹೆಚ್ಚಿಸಲು ಲವ್ ಜಿಹಾದ್ ಮೂಲಕ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗುತ್ತಿದೆ. ಇದನ್ನು ದೇಶದ ಬೇರೆ ಬೇರೆ ಸ್ಥಳಗಳಲ್ಲಿ ಮತಾಂಧರು ಮಾಡಿರುವ ಭಾಷಣಗಳು ಸಾಕ್ಷಿಯಾಗಿವೆ. ಓವೈಸಿಯಂತಹ ಕೋಮುವಾದಿಗಳು ಬಹಿರಂಗವಾಗಿ ಲವ್ ಜಿಹಾದ್‍ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಇತ್ತೀಚೆಗೆ ಉಡುಪಿಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಯುವಕನೋರ್ವ ನಾಪತ್ತೆಯಾಗಿದ್ದು, ಇದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದ ಅವರು, ಈ ಪ್ರಕರಣವು ಬಹು ಯೋಜನಾಬದ್ಧವಾಗಿ ನಡೆದಿದೆ. ಚಿಕ್ಕ ಚಿಕ್ಕ ಬಾಲಕಿಯರನ್ನು ಸಹ ಪ್ರಚೋದನೆಗೆ ಒಳಪಡಿಸಿ ಹಣದ ಆಮಿಷವನ್ನು ತೋರಿಸಿ ಲವ್ ಜಿಹಾದ್ ಹೆಸರಿನಲ್ಲಿ ಸಮಾಜ ಪರಿವರ್ತನೆಯ ಹುನ್ನಾರ ವ್ಯಾಪಕವಾಗಿ ನಡೆಯುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಶೀಘ್ರ ಮತಾಂತರ ಕಾಯ್ದೆಯನ್ನು ಜಾರಿಗೊಳಿಸುವ ಅಗತ್ಯವಿದೆ. ಹಣದ ಆಮಿಷವೊಡ್ಡಿ ಏನು ಬೇಕಾದರೂ ಮಾಡಬಹುದೆಂಬ ಮನಸ್ಥಿತಿಯಲ್ಲಿರುವ ಒಂದು ಕೋಮಿನ ಜನರ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವ ನಮ್ಮ ಧರ್ಮದ ಹೆಣ್ಣು ಮಕ್ಕಳನ್ನು ರಕ್ಷಿಸಲು ಶೀಘ್ರದಲ್ಲಿಯೇ ಮತಾಂತರ ಕಾಯ್ದೆಯನ್ನು ಜಾರಿಗೊಳಿಸಬೇಕೆಂದರು.

ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಮತಾಂತರ ಕಾಯ್ದೆಯನ್ನು ಜಾರಿಗೊಳಿಸುವ ಕುರಿತು ಮತಾಂತರ ಕಾಯ್ದೆ ಜಾರಿಯಲ್ಲಿರುವ ಬೇರೆ ಬೇರೆ ರಾಜ್ಯಗಳಲ್ಲಿ ಸಾಧಕ-ಬಾಧಕಗಳನ್ನು ಪರಿಗಣಿಸಿ, ಪೋಲೀಸ್ ಇಲಾಖೆಯ ವರದಿಯನ್ನಾಧರಿಸಿ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು ಎಂಬ ಬಗ್ಗೆ ಚರ್ಚೆಯಾಗುವ ಅಗತ್ಯವಿದೆ. ಮತಾಂತರ ಕಾಯ್ದೆ ಜಾರಿಗೊಳಿಸುವ ಬಗ್ಗೆ ವಿಶೇಷ ಚರ್ಚೆ ಮತ್ತು ಅಧ್ಯಯನ ಆಗಬೇಕು. ಗೃಹ ಸಚಿವರು, ಮುಖ್ಯಮಂತ್ರಿ, ಪೋಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಲಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಕಾಯ್ದೆಗೆ ರಕ್ಷಣೆ ದೊರೆಯಬೇಕು ಎಂದರು.

ರಾಜರಾಜೇಶ್ವರಿ ನಗರ ಮತ್ತು ಶಿರಾದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಜಯ ಖಚಿತ. ನಾನು 2 ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದು, ಅಲ್ಲಿನ ಜನತೆ ಬಿಜೆಪಿಯ ಪರವಾಗಿದ್ದಾರೆ. ಶಿರಾ ಬಿಜೆಪಿಗೆ ಕಠಿಣವಾಗಿತ್ತು. ಆದರೆ ಕಳೆದ ಮೂರು ನಾಲ್ಕು ತಿಂಗಳಿನಿಂದ ಬಿಜೆಪಿಯ ಮುಖಂಡರು ಹಳ್ಳಿಗಳಲ್ಲಿ ಪ್ರವಾಸ ಮಾಡಿ ಹೊಸಬರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಪಕ್ಷವನ್ನು ಸದೃಢವಾಗಿ ಸಂಘಟನೆಯನ್ನು ಬಲಪಡಿಸುವ ಕೆಲಸವನ್ನು ಮಾಡಿದ್ದಾರೆ ಎಂದ ಅವರು, ಆರ್.ಆರ್ ನಗರದಲ್ಲಿ ಶೇಕಡವಾರು ಮತದಾನ ಕಡಿಮೆಯಾಗಿದ್ದು, ನಿರೀಕ್ಷೆಯಂತೆ ಗೆಲುವಿನ ಅಂತರ ಕಡಿಮೆಯಾದರೂ ಗೆಲುವು ನಮ್ಮದೇ. ಡಿಕೆ ರವಿ ತಾಯಿ ಹೇಳಿಕೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಶಿರಾದಲ್ಲಿ ಬಿಜೆಪಿ ಭಾರೀ ಮತಗಳ ಅಂತರದಿಂದ ಗೆಲ್ಲಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News