ರೈತ ಪರ ಕಾನೂನುಗಳ ಜಾರಿಗೆ ಆಗ್ರಹಿಸಿ ನ.5ರಂದು ರಾಜ್ಯದಲ್ಲಿ ಹೆದ್ದಾರಿ ಬಂದ್

Update: 2020-11-04 15:17 GMT

ಬೆಂಗಳೂರು, ನ.4: ಪಂಜಾಬ್, ರಾಜಸ್ಥಾನ, ಕೇರಳ ಮಾದರಿಯಲ್ಲಿ ತಂದಿರುವ ರೈತರ ಪರ ಕಾನೂನುಗಳನ್ನು ಜಾರಿಗೆ ತರಲು ಒತ್ತಾಯಿಸಿ ನವೆಂಬರ್ 5 ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಹೆದ್ದಾರಿಯ ಒಂದು ಸ್ಥಳದಲ್ಲಿ ರಸ್ತೆ ಬಂದ್ ಚಳವಳಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ನ.5ರಂದು ಮಧ್ಯಾಹ್ನ 12 ಗಂಟೆಯಿಂದ 1 ಗಂಟೆಯವರೆಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ಬಂದ್ ಮಾಡಲಾಗುವುದು. ಅಲ್ಲದೆ, ರಾಜ್ಯದ ಎಲ್ಲ ಜಿಲ್ಲಾ ಹೆದ್ದಾರಿಯ ಒಂದು ಸ್ಥಳದಲ್ಲಿ ರಸ್ತೆ ಬಂದ್ ಚಳವಳಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಒತ್ತಾಯಗಳು: ರಾಜ್ಯ ಸರಕಾರ ಜಾರಿಗೆ ತರಲಿರುವ ರೈತ ವಿರೋಧಿ ಸುಗ್ರೀವಾಜ್ಞೆಯನ್ನು ಕೈಬಿಡಬೇಕು. ಪಂಜಾಬ್ ಸರಕಾರ ಜಾರಿಗೆ ತಂದಿರುವ ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್‍ಪಿ) ಕಡಿಮೆ ದರದಲ್ಲಿ ಖರೀದಿ ಮಾಡಿದರೆ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಪಂಜಾಬ್ ಸರಕಾರ ಎರಡು ವರ್ಷಗಳ ಕಾಲ ಜೈಲುವಾಸ ಹಾಗೂ ದಂಡ ವಿಧಿಸುವಂತ ಈ ಕಾನೂನನ್ನು ಜಾರಿಗೆ ತಂದಿದೆ. ರಾಜಸ್ಥಾನ ಸರಕಾರವು ಪಂಜಾಬ್ ಮಾದರಿಯಲ್ಲಿಯೇ ಇದೇ ತೀರ್ಮಾನಗಳನ್ನು ನವೆಂಬರ್ 1 ರಿಂದ ಜಾರಿಗೆ ತಂದಿರುವುದಾಗಿ ಘೋಷಣೆ ಮಾಡಿದೆ. ಕೇರಳ ಸರಕಾರವು 16 ತರಕಾರಿಗಳಿಗೆ ಯೋಗ್ಯ ಬೆಲೆಯನ್ನು ನಿಗದಿಮಾಡಿ ರೈತರಿಗೆ ಪದೇ ಪದೇ ವ್ಯತ್ಯಾಸದಿಂದ ನಷ್ಟ ಉಂಟುಮಾಡುವುದನ್ನು ತಪ್ಪಿಸುವುದಾಗಿ ಈ ಕಾನೂನನ್ನು ಜಾರಿಗೆ ತಂದಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ರಾಜ್ಯದಲ್ಲಿಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾನು ರೈತನ ಮಗ, ನಮ್ಮದು ರೈತ ಪರ ಸರಕಾರ ಎಂದು ಹೇಳುತ್ತಾ ರೈತ ವಿರೋಧಿ ಸುಗ್ರೀವಾಜ್ಞೆ ಜಾರಿಗೆ ತಂದಿದ್ದಾರೆ. ಆದರೆ ರಾಜ್ಯದಲ್ಲಿ ಬೆಲೆ ನಷ್ಟದಿಂದ ರೈತರು ಬೆಳೆದಂತ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಿದಂತೆ ಒತ್ತಾಯಿಸಿದರೆ ನಮ್ಮ ಸರಕಾರದಲ್ಲಿ ಸಂಬಳ ಕೊಡುವುದಕ್ಕೆ ಹಣ ಇಲ್ಲ. ಏನು ಮಾಡಲಿ ಎಂಬ ಹತಾಶೆಯ ಭಾವನೆ ವ್ಯಕ್ತಪಡಿಸುತ್ತಾರೆ. ಹಾಗಾದರೆ ರೈತರನ್ನು ಕಾಪಾಡುವುದು ಎಲ್ಲಿಂದ ಎಂದು ಅವರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಚುನಾವಣೆಯ ಮಂಪರಿನಲ್ಲಿ ಇರುಬಹುದು. ಇದರಿಂದ ಹೊರ ಬಂದು ಹೊರ ರಾಜ್ಯಗಳಾದ ಪಂಜಾಬ್, ರಾಜಸ್ಥಾನ, ಕೇರಳ ಮಾದರಿಯಲ್ಲಿ ತಂದಿರುವ ರೈತರ ಪರ ಕಾನೂನುಗಳನ್ನು ಜಾರಿಗೆ ತರಲು ಮುಂದಾಗಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಅತಿವೃಷ್ಟಿಯಿಂದ ಆದಂತಹ ನಷ್ಟ, ಬೆಲೆ ನಷ್ಟದಿಂದ ರೈತರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ರಾಜ್ಯದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಕೇಂದ್ರದಿಂದ ಪ್ರಕೃತಿ ವಿಕೋಪ ನಿಧಿಯನ್ನು ಪಡೆಯಲು ಮತ್ತು ಜಿಎಸ್‍ಟಿಯಿಂದ ಬರಬೇಕಾಗಿರುವ 13 ಸಾವಿರ ಕೋಟಿ ರೂಪಾಯಿ ಪಡೆದು ರೈತರಿಗೆ ನೆರವಾಗಬೇಕೆಂದು ಒತ್ತಾಯಿಸಿ ಹೆದ್ದಾರಿ ಬಂದ್ ಚಳವಳಿ ನಡೆಸುತ್ತಿದ್ದೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News