×
Ad

ಪ್ರವಾದಿ ಮುಹಮ್ಮದ್ ಶೋಷಿತ ಸಮಾಜವನ್ನು ಸಮಾನತೆಯ ಕಡೆಗೆ ಮುನ್ನಡೆಸಿದ ಮಾನವತಾವಾದಿ

Update: 2020-11-04 22:01 IST

ಮೈಸೂರು,ನ.4: ಪ್ರವಾದಿ ಮುಹಮ್ಮದ್ ಅವರು ಅತ್ಯಂತ ಕಠಿಣ ಹಾಗೂ ಸವಾಲಿನ ಸಂದರ್ಭದಲ್ಲಿ ಮಧ್ಯಪ್ರಾಚ್ಯದ ಮಕ್ಕಾದಲ್ಲಿ ಜನಿಸಿ ಅತ್ಯಂತ ಅರಾಜಕತೆ ಮತ್ತು ಶೋಷಣಾ ಪ್ರವೃತ್ತಿಗಳಿಗೆ ಗುರಿಯಾಗಿದ್ದಂತಹ ಸಮಾಜವನ್ನು ಮಾನವೀಯತೆ ಮತ್ತು ಸಮಾನತೆಯ ಕಡೆಗೆ ಮುನ್ನಡೆಸಿದರು ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಅಭಿಪ್ರಾಯಪಟ್ಟರು.

ಜಮಾಅತೆ ಇಸ್ಲಾಮಿ ಹಿಂದ್, ಮೈಸೂರು ವತಿಯಿಂದ ನಗರದ ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಅರ್ಫಾತ್ ಫಂಕ್ಷನ್ ಹಾಲ್‍ನಲ್ಲಿ ಬುಧವಾರ ಆಯೋಜಿಸಿದ್ದ ಪ್ರವಾದಿ ಮುಹಮ್ಮದ್ “ಮಾನವತೆಯ ಮಾರ್ಗದರ್ಶಕ” ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಮುಹಮ್ಮದ್ ಅವರು ಗುಲಾಮಗಿರಿ ಮತ್ತು ದಬ್ಬಾಳಿಕೆಯ ಪ್ರವೃತ್ತಿಗಳಿಂದ ಮನುಕುಲವನ್ನು ಪಾರು ಮಾಡಿ ಬಿಡುಗಡೆಗೆ ನಾಂದಿ ಹಾಡಿದ ಮಹಾನ್ ಪ್ರವಾದಿ. ಅವರು ಚಿಕ್ಕ ವಯಸ್ಸಿನಿಂದಲೂ ಕೂಡ ತಮ್ಮ ಬಂಧು ಬಾಂಧವರಿಂದ ಹಲವಾರು ರೀತಿಯ ಕಿರುಕುಳಕ್ಕೆ ಒಳಗಾಗಿದ್ದರೂ ಕೂಡ ಛಲಬಿಡದೆ ಸಮಾಜ ಪರಿವರ್ತನೆಗಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡರು ಎಂದು ಹೇಳಿದರು.

ಅವರು ವೈರಿಗಳಿಗಾಗಿಯೂ ಪ್ರಾರ್ಥಿಸಿದ ಮಹಾನ್ ಮಾನವತಾವಾದಿಯಾಗಿದ್ದರು. ಅವರು ಮನುಷ್ಯರು ಮತ್ತು ಸಕಲ ಜೀವರಾಶಿಗಳ ಕಲ್ಯಾಣಕ್ಕಾಗಿ ನಿರಂತರವಾಗಿ ಪ್ರಾರ್ಥಿಸಿದಂತ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.

ಅವರು ಸರಳತೆಯ ಹರಿಕಾರರಾಗಿ ಭೋಗ ಜೀವನವನ್ನು ತಿರಸ್ಕರಿಸಿ ಮನುಕುಲದ ಒಳಿತಿಗಾಗಿ ಎಲ್ಲಾ ಸಂಪತ್ತನ್ನು ಕೂಡ ವಿನಿಯೋಗಿಸಿದರು. ಅವರು ಸಂಪತ್ತು ಲೋಕ ಕಲ್ಯಾಣಕ್ಕಾಗಿ ವಿನಿಯೋಗವಾಗಬೇಕೆ ಹೊರತು ವ್ಯಕ್ತಿ ಅಥವಾ ಕುಟುಂಬದ ಸ್ವಾರ್ಥಕ್ಕಾಗಿ ಅಲ್ಲ ಎಂದು ಬಲವಾಗಿ ಪ್ರತಿಪಾದಿಸಿದರು. ಸಂಪತ್ತಿನ ಶುದ್ಧೀಕರಣ ಮತ್ತು ಕಲ್ಯಾಣ ರಾಜ್ಯಗಳ ಸ್ಥಾಪನೆ ಪ್ರವಾದಿ ಮುಹಮ್ಮದ್ ರ ಶ್ರೇಷ್ಠ ಸಂದೇಶಗಳಾಗಿವೆ. ಅಂದು ಅರೇಬಿಯಾದಲ್ಲಿ ಮಹಿಳೆಯರು ಹುಟ್ಟುವುದೇ ಮಹಾ ಶಾಪ ಎಂದು ಭಾವಿಸಿದ್ದ ಕಾಲದಲ್ಲಿ ಲಿಂಗ ಸಮಾನತೆ ಮತ್ತು ಸ್ವಾತಂತ್ರ್ಯಗಳಿಗಾಗಿ ಇಸ್ಲಾಂ ಧರ್ಮದಲ್ಲಿ ವಿಶೇಷ ಮಹತ್ವ ನೀಡಿದರು ಎಂದು ತಿಳಿಸಿದರು.

ಯುವಕರ ಸಬಲೀಕರಣಕ್ಕೆ ಪ್ರವಾದಿ ಮುಹಮ್ಮದ‍ರು ವಿಶೇಷ ಮಹತ್ವ ನೀಡಿದರು. ಯೌವ್ವನವೂ ಮನುಷ್ಯರ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಆರೋಗ್ಯ ಆಯುಷ್ಯ ವ್ಯಕ್ತಿತ್ವ ಸಮಾಜದ ಒಳಿತಿಗಾಗಿ ಯುವಕರು ತಮ್ಮ ಶಕ್ತಿಯನ್ನು ವಿನಿಯೋಗಿಸಬೇಕೆಂದು ಪ್ರಬಲವಾಗಿ ಪ್ರತಿಪಾದಿಸಿದರು. ಅವರು ಮನುಷ್ಯರ ಬದುಕು ಸತ್ಯಾನ್ವೇಷಣೆ, ಜನಸೇವೆ, ಮತ್ತು ಲೋಕ ಕಲ್ಯಾಣಗಳಿಗಾಗಿ ಅರ್ಪಣೆಗೊಳ್ಳಬೇಕೆಂದು ಕರೆ ನೀಡಿದರು. ಅವರ ಕೊನೆಯ ಸಂದೇಶ ನಿಮ್ಮ ರಕ್ತ, ಸಂಪತ್ತು ಮತ್ತು ಅಧಿಕಾರ ಅಂತಿಮ ದಿನದ ತನಕ ಪವಿತ್ರವಾಗಿದ್ದು, ನಿಮ್ಮ ಬದುಕು ಲೋಕಕಲ್ಯಾಣಕ್ಕೆ ಸದ್ಬಳಕೆಯಾಗಬೇಕೆಂದು ಮಕ್ಕಾದಲ್ಲಿ ಕರೆ ನೀಡಿದರು ಎಂದು ಹೇಳಿದರು..

ಮತಾಂಧರಾಗಿ ಇತರರ ಪ್ರಾಣಗಳನ್ನು ತೆಗೆಯುವ ಸಂಸ್ಕೃತಿಯನ್ನು ಇಸ್ಲಾಂ ಧರ್ಮ ಒಪ್ಪುವುದಿಲ್ಲವೆಂದು ಬಲವಾಗಿ ಹೇಳಿದರು. ಅವರು ಮನುಕುಲಕ್ಕೆ ಶ್ರೇಷ್ಠ ಧರ್ಮ ಮತ್ತು ಸಂದೇಶಗಳನ್ನು ನೀಡಿ ಸಾರ್ವಕಾಲಿಕ ಪ್ರಸ್ತುತತೆ ಹೊಂದಿರುವ ಮಹಾನ್ ದಾರ್ಶನಿಕ. ಇತ್ತೀಚಿನ ಯುವಕರು ಅವರ ಋಣವನ್ನು ರಚನಾತ್ಮಕ ಚಿಂತನೆಗಳು ಮತ್ತು ಕೊಡುಗೆಗಳಿಂದ ತೀರಿಸಬೇಕು ಎಂದು ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಮಾತನಾಡಿ, ಕೋಮುವಾದಿಗಳು ಮತ್ತು ಭಯೋತ್ಪಾದಕರು ನಿಜವಾದ ಮುಸ್ಲಿಮನಾಗಿರಲು ಸಾಧ್ಯವಿಲ್ಲ. ಕೊಲೆ ಸುಲಿಗೆ ಮತ್ತು ಭಯೋತ್ಪಾದನೆಗಳಿಗೆ ಇಸ್ಲಾಂ ಧರ್ಮದಲ್ಲಿ ಯಾವುದೇ ಮಹತ್ವ ಇಲ್ಲ ಎಂದು ಹೇಳಿದರು.
ಮುಸ್ಲಿಮರು ವಿಶೇಷವಾಗಿ ಶಾಂತಿ ಧೂತರಾಗಿ ಮಾನವ ಕಲ್ಯಾಣಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡು ಪ್ರವಾದಿ ಮುಹಮ್ಮದ‍ರ ಶ್ರೇಷ್ಠ ಪರಂಪರೆಯನ್ನು ಮುಂದುವರಿಸಬೇಕು ಎಂದರು.

ವಿಧವೆಯರನ್ನು ಅನಾಥರಾಗಿಸದೆ ಅವರಿಗೆ ಹೊಸ ಬಾಳು ನೀಡುವ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿಯಬೇಕು. ತಾಯಿ ತಂದೆ ಮತ್ತು ಗುರು ಹಿರಿಯರ ಪ್ರೀತಿ ಮತ್ತು ಸೇವೆಯ ಋಣವನ್ನು ಜೀವಿತಾವಧಿಯಲ್ಲೇ ತೀರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೌಲಾನ ಮುಫ್ತಿ ಸೈಯದ್ ತಾಜುದ್ದೀನ್ ಸಾಹೇಬ್, ಅಸಾದುಲ್ಲಾ, ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಪಧಾದಿಕಾರಿಗಳು ಮತ್ತು ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News