ಅಕ್ರಮ ಶಸ್ತ್ರಾಸ್ತ್ರ ವಿರುದ್ಧ ಶೀಘ್ರ ಅಭಿಯಾನ: ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್

Update: 2020-11-04 16:50 GMT

ಕಲಬುರ್ಗಿ, ನ.4: ಮಾದಕ ವಸ್ತುಗಳ ಕುರಿತು ಆರಂಭಿಸಿರುವ ಕಾರ್ಯಾಚರಣೆ ಮಾದರಿಯಲ್ಲಿಯೇ ಅಕ್ರಮ ಶಸ್ತ್ರಾಸ್ತ್ರ ವಿರುದ್ಧವೂ ಶೀಘ್ರ ಅಭಿಯಾನ ಕೈಗೊಳ್ಳಲಿದ್ದೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದರು.

ಬುಧವಾರ ನಗರದಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಶಸ್ತ್ರಾಸ್ತ್ರ ಸಾಗಾಟ, ಬಳಕೆ ವಿಚಾರ ಗಂಭೀರವಾಗಿದೆ. ಜತೆಗೆ, ಶಸ್ತ್ರಾಸ್ತ್ರ ಬಳಕೆ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದೆ. ಇದಕ್ಕೆ ನಿಯಂತ್ರಣ ಅಗತ್ಯತೆ ಇದೆ ಎಂದು ಹೇಳಿದರು.

ಡ್ರಗ್ಸ್ ವಿಷಯವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಝೀರೋ ಟಾಲರೆನ್ಸ್ ಡ್ರಗ್ಸ್ ಅಭಿಯಾನ ಆರಂಭಿಸಿದ್ದೇವೆ. ಅಕ್ರಮ ಡ್ರಗ್ಸ್ ದಂಧೆಗೆ ಸಂಬಂಧಿಸಿ ಮೂರು ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದೇವೆ. ಡ್ರಗ್ಸ್ ಪ್ಲೆಡ್ಲರ್ ಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸುತ್ತಿದ್ದೇವೆ. ಜೊತೆಗೆ ಕೇಂದ್ರದ ಎನ್.ಡಿ.ಪಿ.ಎಸ್ ಪಿಟಿಐ ಕಾಯ್ದೆ ಅಡಿಯೂ ಪ್ರಕರಣ ದಾಖಲು ಮಾಡಿದ್ದೇವೆ ಎಂದರು.

ಕೊರೋನ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಇದುವರೆಗೆ 9500 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, 1500 ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನ ಸೋಂಕಿನಿಂದಾಗಿ 88 ಜನ ಪೊಲೀಸ್ ಸಿಬ್ಬಂದಿ ನಿಧನರಾಗಿದ್ದಾರೆ. ಮೃತರಿಗೆ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News