''ನೀರು ಕೊಡಲಾಗದಿದ್ದರೆ ವಿಷವಾದರೂ ಕೊಡಿ'': ದಲಿತ ಕೇರಿಯ ಜನರ ಆಕ್ರೋಶ

Update: 2020-11-04 17:50 GMT

ಬಾಗೇಪಲ್ಲಿ, ನ.4: ನೀರಿಗಾಗಿ 3-4 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಮನವಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ನಿಮ್ಮಂದ ನಮಗೆ ‘ನೀರು ಕೊಡಲಾಗದಿದ್ದರೆ ವಿಷವಾದರೂ ಕೊಡಿ’ ಎಂದು ತಾಲೂಕಿನ ತಿಮ್ಮಂಪಲ್ಲಿ ಗ್ರಾಪಂ ವ್ಯಾಪ್ತಿಯ ಚಂಚುರಾಯನಪಲ್ಲಿ ದಲಿತ ಕೇರಿಯ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 110 ಕುಟುಂಬಗಳಿರುವ ಈ ದಲಿತ ಕಾಲನಿಯಲ್ಲಿ 540 ಜನಸಂಖ್ಯೆ ಇದೆ. ದಿನನಿತ್ಯ ಕುಡಿಯಲು ಮತ್ತು ದಿನ ಬಳಕೆಗೆ ನೀರಿನದೇ ದೊಡ್ಡ ಸಮಸ್ಯೆ ಆಗಿದೆ. ನೀರಿಗಾಗಿ ಮಹಿಳೆಯರು, ಮಕ್ಕಳು, ವೃದ್ಧರು ಬಿಂದಿಗೆಗಳನ್ನು ಹಿಡಿದು ಕನಿಷ್ಠ 3-4 ಕಿ.ಮೀ. ನಡೆದುಕೊಂಡು ಪಕ್ಕದ ಹಳ್ಳಿಗಳಾದ ಬೊಮ್ಮಯ್ಯಗಾರಿಪಲ್ಲಿ, ಮರಸನಪಲ್ಲಿ, ಗುಂಡ್ಲಪಲ್ಲಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ನೀರಿನ ಸಮಸ್ಯೆ ಬಗೆಹರಿಸುವಂತೆ 3-4 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಎಂದು ಹೋರಾಟಗಾರರು ಆರೋಪಿಸಿದರು.

ಅಧಿಕಾರಿಗಳು ನಾಮಕಾವಸ್ಥೆಗೆ ಖಾಸಗಿ ಟ್ಯಾಂಕರ್‌ನಿಂದ ಈ ಹಿಂದೆ ಆಗಾಗ ನೀರು ಸರಬರಾಜು ಮಾಡುತ್ತಿದ್ದರು. ಆದರೆ, ನೀರು ಸರಬರಾಜು ಮಾಡುವವರಿಗೆ ಹಣ ನೀಡಿಲ್ಲ ಎಂದು ಅವರೂ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ. ಈ ಕಾಲನಿಯಲ್ಲಿ ನೀರಿನ ಸಮಸ್ಯೆ ಇಷ್ಟೊಂದು ಜಟಿಲವಾಗಿದ್ದರೂ ತಿಮ್ಮಂಪಲ್ಲಿ ಗ್ರಾಪಂ ಪಿಡಿಒ ನಾರಾಯಣಸ್ವಾಮಿ ತಮಗೆ ಸಂಬಂಧವೇ ಇಲ್ಲದಂತೆ ಇದ್ದಾರೆ.ಗ್ರಾಮಕ್ಕೆ ಬರುವುದೇ ಇಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಚಂಚುರಾಯನಪಲ್ಲಿ ಗ್ರಾಮದಲ್ಲಿ ಸಿಆರ್‌ಎಫ್ ಅನುದಾನದಲ್ಲಿ ಖಾಸಗಿ ಟ್ಯಾಂಕರ್‌ನಿಂದ ಜನರಿಗೆ ಸರಬರಾಜು ಮಾಡಲಾಗುತ್ತಿತ್ತು. ಈಗ ಸ್ಥಗಿತಗೊಂಡಿರುವುದು ಗಮನಕ್ಕೆ ಬಂದಿಲ್ಲ. ಇತ್ತೀಚೆಗೆ ಅಲ್ಲಿ ಕೊಳವೆ ಬಾವಿ ಹಾಕಿಸಲಾಗಿತ್ತು. ಆದರೂ ನೀರು ಸಿಗಲಿಲ್ಲ. ಈ ಸಮಸ್ಯೆಯನ್ನು ಪಿಡಿಒ ಅವರೇ ಇತ್ಯರ್ಥಗೊಳಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸರಬರಾಜು ಇಲಾಖೆ ರಾಮಲಿಂಗಾರೆಡ್ಡಿ ಹಾರಿಕೆಯ ಉತ್ತರ ನೀಡಿದರು.

ಪ್ರತಿಭಟನೆಯಲ್ಲಿ ನವೀನ್, ಲಕ್ಷ್ಮೀನರಸಿಂಹಪ್ಪ, ಗಾಯತ್ರಿ, ಪಾವನಿ, ಅಂಜಿನಮ್ಮ, ಗಂಗುಲಮ್ಮ, ಕೃಷ್ಣವೇನಮ್ಮ, ವೆನ್ನೆಲಾ, ವೆಂಕಟಲಕ್ಷ್ಮಮಮ್ಮ, ಚಿನ್ನ ದಂಡಾಯಪ್ಪ, ವೆಂಕಟರಾಮು, ರತ್ನಮ್ಮ, ಚಿನ್ನ ವೆಂಕಟಮ್ಮ ಭಾಗವಿಸಿದ್ದರು.

ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಅನುದಾನ ಬಿಡುಗಡೆಯಾಗಿ, ಖರ್ಚಾಗಿದ್ದರೂ ನೀರಿನ ಸಮಸ್ಯೆ ಇತ್ಯರ್ಥವಾಗಿಲ್ಲ. ಇನ್ನು ಶುದ್ಧ ಕುಡಿಯುವ ನೀರು ನಮ್ಮ ದಲಿತ ಕಾಲನಿಗೆ ಮರೀಚಿಕೆಯೇ ಆಗಿಬಿಟ್ಟಿದೆ. ನಾವು ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಪ್ರತೀ ದಿನ ಕೂಲಿಗೆ ಹೋಗುವ ಮುನ್ನ ಅಕ್ಕಪಕ್ಕದ ಹಳ್ಳಿಗಳಿಗೆ ತೆರಳಿ ನೀರನ್ನು ತರಬೇಕಾದ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಗ್ರಾಮಕ್ಕೆ ಜನಪ್ರತಿನಿಧಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ, ನೀರಿನ ಸಮಸ್ಯೆ ಮಾತ್ರ ಇತ್ಯರ್ಥಗೊಂಡಿಲ್ಲ.
-ಮಂಜುಳಾ, ಕಾಲನಿ ನಿವಾಸಿ

ತಾಲೂಕಿನ ಚಂಚಯರಾಯನಪಲ್ಲಿ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಪಿಡಿಒ ಅವರ ಬಳಿ ಚರ್ಚೆ ಮಾಡಿ, ಕೂಡಲೇ ನೀರನ್ನು ಸರಬರಾಜು ಮಾಡುವಂತೆ ಸೂಚನೆ ಕೊಡುತ್ತೇನೆ.

-ಎಚ್.ಎನ್.ಮಂಜುನಾಥಸ್ವಾಮಿ, ತಾಪಂ ಇಒ

Writer - ಜಿ.ವೆಂಕಟೇಶ್, ಬಾಗೇಪಲ್ಲಿ

contributor

Editor - ಜಿ.ವೆಂಕಟೇಶ್, ಬಾಗೇಪಲ್ಲಿ

contributor

Similar News