ಫ್ರಾನ್ಸ್ ಅಧ್ಯಕ್ಷರಿಂದ ಪ್ರವಾದಿಯ ಅವಹೇಳನ ಖಂಡಿಸಿ ಸುನ್ನಿ ಜಮೀಯತುಲ್ ಉಲಮಾದಿಂದ ಧರಣಿ
ಶಿವಮೊಗ್ಗ, ನ.4: ಪ್ರವಾದಿ ಮುಹಮ್ಮದ್ (ಸ) ಅವರ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಅವಮಾನಕರ ಕಾರ್ಟೂನ್ ಮುದ್ರಿಸಿ, ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬುಧವಾರ ಸುನ್ನಿ ಜಮೀಯತುಲ್ ಉಲಮಾ ಕಮಿಟಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಲಾಯಿತು.
ವಿಶ್ವಕ್ಕೆ ಶಾಂತಿ, ಭಾವೈಕ್ಯತೆ, ಜಾತ್ಯ ತೀತ ಮನೋಭಾವನೆಗಳ ಜೊತೆಗೆ ಸೌಹಾರ್ದಕ್ಕೆ ಹೆಸರಾಗಿರುವ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಆ ದೇಶದ ರಾಜತಾಂತ್ರಿಕ ವಿಚಾರದ ಬಗ್ಗೆ ಭಾರತ ಎಚ್ಚರಿಕೆ ವಹಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಫ್ರಾನ್ಸ್‌ನಲ್ಲಿ ಪೈಗಂಬರರ ಬಗ್ಗೆ ವ್ಯಂಗ್ಯ ಚಿತ್ರಗಳನ್ನು ಬರೆಯಲಾಗಿದೆ. ಅಂತಹ ವ್ಯಂಗ್ಯ ಚಿತ್ರಗಳನ್ನು ಇರಿಸಲು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರೋನ್ ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದರೂ ಕಾರ್ಟೂನ್‌ಗಳನ್ನು ತೆರವುಗೊಳಿಸದೆ ಮುಸ್ಲಿಮರ ವಿರುದ್ಧ ಆಕ್ರಮಣಕಾರಿ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಘೋರ ಪಿತೂರಿ ನಡೆಸಲಾಗುತ್ತಿದೆ. ಇಸ್ಲಾಂ ಧರ್ಮ ಶಾಂತಿ ಬಯಸುವ ಧರ್ಮವಾಗಿದ್ದು, ಪದೇ ಪದೇ ಪ್ರವಾದಿ ಮತ್ತು ಇಸ್ಲಾಂ ಧರ್ಮದ ಬಗ್ಗೆ ಈ ರೀತಿ ಅವಹೇಳನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮ್ಯಾಕ್ರೋನ್ ಅವರು ಪ್ರವಾದಿ ಮತ್ತು ಇಸ್ಲಾಂ ಧರ್ಮದ ಕ್ಷಮೆ ಯಾಚಿಸಬೇಕು. ಫ್ರೆಂಚ್ ರಾಯಭಾರ ಕಚೇರಿಗಳು ಮತ್ತು ದೂತವಾಸ ಕಚೇರಿಗಳನ್ನು ಮುಚ್ಚಬೇಕು. ಎಲ್ಲ ಮುಸ್ಲಿಂ ರಾಷ್ಟ್ರಗಳು ಫ್ರಾನ್ಸ್ ತಮ್ಮ ರಾಯಭಾರಿಗಳನ್ನು ಪ್ರತಿಭಟನೆಯ ಸಂಕೇತವಾಗಿ ವಾಪಾಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೌಲಾನಾ ಹಫೀಝ್, ಮೌಲಾನಾ ಮುಬಾರಕ್ ಹುಸೈನ್, ಮೌಲಾನ ಸುಹೈಲ್ ಅಹ್ಮದ್, ಮೌಲಾನ್ ಹಾಶೀಮ್, ಸಮಿತಿಯ ಪ್ರಮುಖರಾದ ಅಬ್ದುಲ್ ಸತ್ತಾರ್ ಬೇಗ್, ಇಜಾಝ್ ಪಾಷ, ಅಫ್ತಾಬ್ ಪರ್ವೀಝ್, ಮುನಾವರ್ ಪಾಷ ಮೊದಲಾದವರಿದ್ದರು.