ನಿರುದ್ಯೋಗ, ಬಡತನ ಹೆಚ್ಚಿಸಿದ್ದೇ ಬಿಜೆಪಿಯ ಸಾಧನೆ: ಬಿಎಸ್ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ

Update: 2020-11-04 18:03 GMT

ಮಂಡ್ಯ, ನ.4: ದೇಶದಲ್ಲಿ ಆರ್ಥಿಕ ಕುಸಿತ ಮತ್ತು ನಿರುದ್ಯೋಗ ಸೃಷ್ಟಿಸಿದ್ದೇ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರಕಾರದ ಬಹುದೊಡ್ಡ ಸಾಧನೆಯಾಗಿದೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಟೀಕಿಸಿದ್ದಾರೆ.

ನಗರದ ಕೆ.ವಿ.ಶಂಕರಗೌಡ ಭವನದಲ್ಲಿ ಬುಧವಾರ ನಡೆದ ಬಿಎಸ್ಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶ ಮತ್ತು ವಿವಿಧ ಸಮುದಾಯಗಳ ಮುಖಂಡರು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಕೋವಿಡ್-19 ಆಹ್ವಾನಿಸಿ ಅವೈಜ್ಞಾನಿಕ ಲಾಕ್‍ಡೌನ್ ಹೇರಿ ದೇಶದಲ್ಲಿ ಸುಮಾರು 13.5 ಕೋಟಿ ಜನರು ಉದ್ಯೋಗ ಕಳೆದುಕೊಳ್ಳುವಂತೆ ಹಾಗೂ 12 ಕೋಟಿ ಮಂದಿ ತಲ್ಲಣಿಸುವಂತೆ ಮಾಡಿದ್ದಾರೆ ಎಂದರು.

ನರೇಂದ್ರ ಮೋದಿ ಅವರ ಸರಕಾರವು ಕೋವಿಡ್-19ರನ್ನು ಆಹ್ವಾನಿಸಿ ಅವೈಜ್ಞಾನಿಕ ಲಾಕ್‍ಡೌನ್ ಹೇರಿ ಭಾರತದಲ್ಲಿ ಅಂದಾಜು 13.5 ಕೋಟಿ ಜನರು ಉದ್ಯೋಗ ಕಳೆದುಕೊಂಡು, 12 ಕೋಟಿ ಜನರು ಬಡತನದಲ್ಲಿ ತಲ್ಲಣಿಸುವಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಬಲಿಷ್ಠ ಭಾರತ ಕಟ್ಟುವ ಆಶಯ, ಸಂಕಲ್ಪದೊಂದಿಗೆ ಸತತ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಸರಕಾರದ ಅವಧಿಯಲ್ಲಿ ಭಾರತ ಪ್ರಕಾಶಿಸಿದ್ದಕ್ಕಿಂತ ಕತ್ತಲಿಗೆ ಸರಿದಿದ್ದೇ ಹೆಚ್ಚು. ರೂಪಾಯಿ ಅಪಮೌಲ್ಯ, ಬೆಲೆ ಏರಿಕೆ, ಜಿಡಿಪಿ ಕುಸಿತದಂಥ ಸರಣಿ ಆಘಾತ ಜನರ ನಿತ್ಯ ಬದುಕಿಗೆ ಗ್ರಹಣ ಹಿಡಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಮತದಾರರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು 20 ವರ್ಷಗಳ ಕಾಲ ದೂರವಿಟ್ಟು ಸರಿಯಾದ ಪಾಠ ಕಲಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ, ನೋವು, ದುಸ್ಥಿತಿಗಳನ್ನು ಎದುರಿಸಿ ಆಧುನಿಕ ಗುಲಾಮಗಿರಿಗೆ ನೂಕಿಸಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಬಿಎಸ್ಪಿ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಮಾತನಾಡಿ, ದೇಶದ ಆರ್ಥಿಕ ಕುಸಿತ ಮತ್ತು ನಿರುದ್ಯೋಗ, ಬಡತನವನ್ನು ಹೆಚ್ಚಿಸುವುದು. ಕಾಪೋರೇಟ್ ಕುಳಗಳ ಹಿತ ಕಾಪಾಡುವುದೇ ಬಿಜೆಪಿ ಸರಕಾರದ ಆಡಳಿತದ ಧ್ಯೇಯವಾಗಿದೆ ಎಂದು ಟೀಕಿಸಿದರು.

ಬಹುಜನರು ದೇಶವಾಳುವ ರಾಜಕೀಯ ಸಾಮರ್ಥ್ಯ ಬೆಳೆಸುವುದೇ ಬಿಎಸ್ಪಿಯ ಮೂಲ ಧ್ಯೇಯವಾಗಿದೆ. ಪಕ್ಷ ಮೂಲ ನಿವಾಸಿ ಬಹುಜನರ ಕೈಗೆ ರಾಜಕೀಯ ಅಧಿಕಾರಿ ಸಿಗಬೇಕು ಎಂಬು ಉದ್ದೇಶದಿಂದ ಕಾನ್ಶಿರಾಂ ಅವರು, ಸೈಕಲ್‍ನಲ್ಲಿ ದೇಶ ಸುತ್ತಿ ಪಕ್ಷ ಕಟ್ಟಿದರು. ಕಾರ್ಯಕರ್ತರು ಪಕ್ಷ ಸಂಘಟನೆ ಮೂಲಕ ಅಧ್ಯಕ್ಷೆ ಮಾಯಾವತಿ ಅವರನ್ನು ಪ್ರಧಾನಮಂತ್ರಿ ಮಾಡುವ ಸಂಕಲ್ಪ ಮಾಡಬೇಕು ಎಂದು ಅವರು ಕರೆ ನೀಡಿದರು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಮಾಜಿ ಶಾಸಕ ಬಸವರಾಜು, ರಾಜ್ಯ ಕಾರ್ಯದರ್ಶಿ ಎಂ.ಎಸ್.ವೆಂಕಟೇಶ್, ವೆಂಕಟಗಿರಿಯಯ್ಯ, ಜಿಲ್ಲಾ ಸಂಯೋಜಕ ಮಹದೇವ್, ಜಿಲ್ಲಾಧ್ಯಕ್ಷ ಎಸ್.ಶಿವಶಂಕರ್, ಉಪಾಧ್ಯಕ್ಷೆ ಲಿಂಗರಾಜಮ್ಮ, ಪ್ರಧಾನ ಕಾರ್ಯದರ್ಶಿ ಅನಿಲ್‍ಕುಮಾರ್, ಸಂಯೋಜಕ ಏಳುಮಲೈ, ಮಂಜುದಾನವ್, ಪ್ರಮೋದ್, ಶಿವರಾಜಮ್ಮ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News