ಟ್ರಂಪ್ ಕೋರ್ಟ್ ಗೆ ಮೊರೆ ; ಜೋ ಬೈಡನ್ ‌ಗೆ ನಿಚ್ಚಳ ಗೆಲುವಿನ ವಿಶ್ವಾಸ

Update: 2020-11-05 02:18 GMT

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಲ್ಲಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್, ಶ್ವೇತಭವನದ ರೇಸ್‌ನಲ್ಲಿ ನಿಚ್ಚಳ ಬಹುಮತ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲ ಮತಗಳ ಎಣಿಕೆ ಮುಗಿದಾಗ ಸ್ಪಷ್ಟ ಜಯ ಸಾಧಿಸುವುದು ಖಚಿತ ಎಂದು ಅವರು ಹೇಳಿದ್ದಾರೆ. ಈವರೆಗೆ ಜೋ ಬೈಡನ್ 253 ಮತಗಳನ್ನು ಪಡೆದಿದ್ದು, ಟ್ರಂಪ್ 213 ಮತಗಳನ್ನ ಪಡೆದಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.

ಇಡೀ ಚುನಾವಣೆಯ ಅಂತಿಮ ಫಲಿತಾಂಶವನ್ನು ನಿರ್ಧರಿಸುವ "ತೂಗುಯ್ಯಲೆ ರಾಜ್ಯ"ಗಳಲ್ಲಿ ಟ್ರಂಪ್‌ಗಿಂತ ಮುನ್ನಡೆಯಲ್ಲಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಜೋ ಬೈಡನ್ ನಿಚ್ಚಳ ಬಹುಮತದತ್ತ ಹೆಜ್ಜೆ ಹಾಕಿದ್ದಾರೆ.

ಈ ಮಧ್ಯೆ ಬಾಕಿ ಇರುವ ಎಣಿಕೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಟ್ರಂಪ್ ಅರ್ಜಿ ಸಲ್ಲಿಸಿದ್ದು, ಮುಂದಿನ ಅಧ್ಯಕ್ಷ ಯಾರು ಎನ್ನುವುದನ್ನು ನಿರ್ಧರಿಸಲು ಪ್ರಮುಖ ರಾಜ್ಯಗಳಲ್ಲಿ ಮರು ಎಣಿಕೆ ನಡೆಸುವಂತೆ ಆಗ್ರಹಿಸಿದ್ದಾರೆ.

"ಸುಧೀರ್ಘ ಎಣಿಕೆ ರಾತ್ರಿಯ ಬಳಿಕ ಅಧ್ಯಕ್ಷ ಪದವಿಯನ್ನು ಅಲಂಕರಿಸಲು ಬೇಕಾದ 270 ಮತಗಳನ್ನು ಪಡೆಯಲು ಸಾಕಷ್ಟು ರಾಜ್ಯಗಳನ್ನು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ಮೂಡಿದೆ" ಎಂದು ತಮ್ಮ ಹುಟ್ಟೂರು ದೆಲಾವರ್‌ನ ವಿಲ್ಮಿಂಗ್ಟನ್‌ನಲ್ಲಿ ಹೇಳಿದ್ದಾರೆ. "ನಾವು ಗೆದ್ದಿದ್ದೇವೆ ಎಂದು ಘೋಷಿಸಲು ನಾನಿಲ್ಲಿಗೆ ಬಂದಿಲ್ಲ. ನ್ಯಾಯಾಲಯದ ನಿರ್ಧಾರ ಬಂದ ಬಳಿಕ ನಾವು ಖಚಿತವಾಗಿ ಜಯ ಸಾಧಿಸುತ್ತೇವೆ ಎಂಬ ನಂಬಿಕೆ ನಮಗಿದೆ ಎಂದು ಹೇಳಲು ಬಂದಿದ್ದೇನೆ" ಎಂದು ವಿವರಿಸಿದರು.

16 ಅಧ್ಯಕ್ಷೀಯ ಮತಗಳನ್ನು ಹೊಂದಿದ ಮಿಚಿಗನ್‌ನಲ್ಲಿ ಬೈಡನ್ ಜಯ ಗಳಿಸಿದ್ದಾರೆ ಎಂದು ವರದಿಯಾಗಿದ್ದರೂ, ಈ ತುರುಸಿನ ಸ್ಪರ್ಧೆ ಇರುವ ರಾಜ್ಯದಲ್ಲಿ ಮತ ಎಣಿಗೆ ಸ್ಥಗಿತಗೊಳಿಸುವಂತೆ ಕೋರಿ ದಾವೆ ಸಲ್ಲಿಸುವುದಾಗಿ ಟ್ರಂಪ್ ಬಳಗ ಘೋಷಿಸಿದೆ. "ಪ್ರತಿ ಮತವನ್ನೂ ಎಣಿಕೆ ಮಾಡಬೇಕು" ಎಂದು ಈ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

"ನಮ್ಮ ಸದ್ದಡಗಿಸಲು ಸಾಧ್ಯವಿಲ್ಲ" ಎಂದು ಬೈಡನ್ ಸೂಚ್ಯವಾಗಿ ಹೇಳಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಕಮಲಾ ಹ್ಯಾರೀಸ್ ಕೂಡಾ ಜತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News