ತುಮಕೂರು : ಕೇಂದ್ರದ ರೈತ ಕಾಯ್ದೆ ವಿರೋಧಿಸಿ ಪ್ರತಿಭಟನೆ

Update: 2020-11-05 08:16 GMT

ತುಮಕೂರು : ಕೇಂದ್ರದ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ರಸ್ತೆ ತಡೆಗೆ ಮುಂದಾದಾಗ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದಪಟೇಲ್ ನೇತೃತ್ವದಲ್ಲಿ ನೂರಾರು ರೈತರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನ ವಿರೋಧಿ ಕಾಯ್ದೆಗಳ ಜಾರಿಯನ್ನು ವಿರೋಧಿಸಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ ತಡೆ ಕಾರ್ಯಕ್ರಮದ ಅಂಗವಾಗಿ, ಕ್ಯಾತ್ಸಂದ್ರದಿಂದ ಜಾಸ್ ಟೋಲ್ ವರೆಗೂ ಮೆರವಣಿಗೆ ಹೊರಟ ರೈತರನ್ನು ಕ್ಯಾತ್ಸಂದ್ರ ಸರ್ಕಲ್ ನಲ್ಲಿ ತಡೆದ ಪೊಲೀಸರು, ಅವರನ್ನು ಬಂಧಿಸಿದರು.

ಕ್ಯಾತ್ಸಂದ್ರ ಬಳಿ ಸಮಾವೇಶಗೊಡಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಆನಂದ ಪಟೇಲ್, ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿರುವ ರೈತ ವಿರೋಧಿ ಮಸೂದೆಗಳಾದ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ, ವಿದ್ಯುತ್ ಖಾಸಗೀಕರಣ ಮಸೂದೆಗಳು ಅತ್ಯಂತ ಜನವಿರೋಧಿ ಮತ್ತು ರೈತ ವಿರೋಧಿಯಾಗಿವೆ. ಇದರ ವಿರುದ್ಧ ರಾಷ್ಟ್ರದಾದ್ಯಂತ ಹೋರಾಟಗಳು ನಡೆಯುತ್ತಿದ್ದು, ಇದರ ಭಾಗವಾಗಿ ನಾವು ರಾಜ್ಯದಲ್ಲಿ ಹೆದ್ದಾರಿ ತಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಪೊಲೀಸರು ಇಲ್ಲಸಲ್ಲದ ನೆಪ ಹೇಳಿ ನಮ್ಮನ್ನು ತಡೆಯುತ್ತಿದ್ದಾರೆ. ಇದು ಪೊಲೀಸ್ ಇಲಾಖೆಗೆ ಶೋಭೆ ತರುವಂತಹದ್ದಲ್ಲ ಎಂದರು.

ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ರೈತರು ಮತ್ತು ರಾಜಕಾರಣಿಗಳ ನಡುವೆ ತಾರತಮ್ಯ ಅನುಸರಿಸುತ್ತಿದೆ. ಈ ಹಿಂದೆ ರಾಜ್ಯ ಬಂದ್‍ಗೆ ಕರೆ ನೀಡಿದ ಸಂದರ್ಭದಲ್ಲಿ ಬೈಕ್ ರ್ಯಾಲಿಗೆ ಅವಕಾಶ ನೀಡಿದೆ ಪ್ರತಿಭಟನೆ ಹತ್ತಿಕ್ಕುವ ಕೆಲಸವನ್ನು ಮಾಡಿದರೂ, ಆದರೆ ರಾಜಕಾರಣಿಯೊಬ್ಬರ ಮನೆಯ ಮೇಲೆ ಈಡಿ ರೈಡ್ ಆದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಯಾವುದೇ ಅನುಮತಿ ಇಲ್ಲದೆ ಬೈಕ್ ರ್ಯಾಲಿ ನಡೆಸಲು ಅವಕಾಶ ಕಲ್ಪಿಸಿದರು. ಇದು ಪೊಲೀಸ್ ಇಲಾಖೆಯ ಇಬ್ಬಗೆಯೇ ನೀತಿ. ಇದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಆನಂದ ಪಟೇಲ್ ನುಡಿದರು.

ರಸ್ತೆಯಲ್ಲಿಯೇ ರೈತರು-ಪೊಲೀಸರ ನಡುವೆ ವಾಗ್ವಾದ

ಶಾಂತಿಯುತವಾಗಿ ಕ್ಯಾತ್ಸಂದ್ರ ಸರ್ಕಲ್‍ನಿಂದ ಜಾಸ್‍ಟೋಲ್ ವರೆಗೆ ಮೆರವಣಿಗೆಗೆ ಮುಂದಾದ ರೈತರನ್ನು ಪೊಲೀಸರು ತಡೆದರು. ಈ ವೇಳೆ ರೈತ ಸಂಘದ ಮುಖಂಡರು ಮತ್ತು ಪೊಲೀಸರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಪೊಲೀಸರ ಕ್ರಮವನ್ನು ಕಟುವಾಗಿಯೇ ಟೀಕಿಸಿದ ಆನಂದ ಪಟೇಲ್, ಪೊಲೀಸರು ರಾಜಕಾರಣಿಗಳ ಗುಲಾಮರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ: ರೈತರನ್ನು ಬಂಧಿಸಿ, ಡಿ.ಆರ್.ಕಚೇರಿ ಬಳಿ ಕರೆ ತಂದ ನಂತರ ಅಲ್ಲಿಯೂ ಪ್ರತಿಭಟನೆ ಮುಂದುವರೆಸಿದ ರೈತರು, ಸರಕಾರ ಜಾರಿಗೆ ತಂದಿರುವ ಕಾಯ್ದೆಗಳು, ಅವುಗಳಿಂದ ರೈತರಿಗೆ ಆಗುವ ತೊಂದರೆಗಳ ಕುರಿತು ವಿವರ ನೀಡುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಧನಂಜಯ ಆರಾಧ್ಯ, ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ರುದ್ರೇಶಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಳೆ ಸಂಪಿಗೆ ಕೀರ್ತಿ, ಕುಣಿಗಲ್ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್, ತುರುವೇಕೆರೆ ತಾಲೂಕು ಅಧ್ಯಕ್ಷ ತಾಳೆಕೇರೆ ನಾಗೇಂದ್ರ, ಶಿರಾ ಉಪಾಧ್ಯಕ್ಷ ಕುದುರೆ ಕುಂಟೆ ಲಕ್ಕಣ್ಣ, ಗುಬ್ಬಿ ತಾಲೂಕು ಅಧ್ಯಕ್ಷ ಚಿದಾನಂದಮೂರ್ತಿ, ಲಂಕೇನಹಳ್ಳಿ ಕಾಂತರಾಜು ಸೇರಿದಂತೆ ನೂರಾರು ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News