ರೈತ-ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆ ಖಂಡಿಸಿ ರೈತರಿಂದ ರಸ್ತೆ ತಡೆದು ಪ್ರತಿಭಟನೆ: ಹಲವರ ಬಂಧನ

Update: 2020-11-05 12:44 GMT

ಕಲಬುರಗಿ, ನ.5: ಕೇಂದ್ರ ಸರಕಾರ ರೈತ-ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಗಳನ್ನು ಜಾರಿ ಮಾಡಿರುವುದನ್ನು ವಿರೋಧಿಸಿ ಹಾಗೂ ನೆರೆ ಪರಿಹಾರಕ್ಕೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶರಣ ಬಸಪ್ಪ ಮಮಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆಗೆ ತಂದಿರುವ ಸುಗ್ರಿವಾಜ್ಞೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆರೆಹಾವಳಿಯಿಂದ ಜನತೆ ಪಡಬಾರದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕಾದ ಸರಕಾರ, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವಂತಹ ನೀತಿಗಳನ್ನು ಜಾರಿ ಮಾಡುತ್ತಿವೆ. ಸರಕಾರ ತನ್ನ ನೀತಿಯನ್ನು ಬದಲಾಯಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದೆಂದು ಶರಣ ಬಸಪ್ಪ ಮಮಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಳೆಯಿಂದಾಗಿ ಹಾನಿಯಾದರೆ 24ಗಂಟೆಯೊಳಗೆ ಸೂಕ್ತ ಕ್ರಮಕೈಗೊಂಡು ಪರಿಹಾರವನ್ನು ಒದಗಿಸಲಾಗುತ್ತದೆ. ಆದರೆ, ಕಲ್ಯಾಣ ಕರ್ನಾಟಕದ ಭಾಗದಲ್ಲಿ ರೈತ ಸಮುದಾಯದ ಬದುಕೇ ನಾಶವಾದರೂ ಕೇಳುವವರು ಇಲ್ಲ. ಸರಕಾರದ ವತಿಯಿಂದಲೇ ತಾರತಮ್ಯ ನೀತಿ ಅನುಸರಿಸಲಾಗುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ರಸ್ತೆ ತಡೆದು ಪ್ರತಿಭಟಿಸಿದ ಎಐಕೆಎಸ್ ಮುಖಂಡ ಮೌಲಾ ಮುಲ್ಲಾ, ಭೀಮಾಶಂಕರ ಮಾಡುಯಾಳ, ಮಹೇಶ್ ಸೇರಿ ಸುಮಾರು 50ಕ್ಕೂ ಹೆಚ್ಚು ರೈತರ ಮುಖಂಡರ್ನು ಪೊಲೀಸರು ವಸಕ್ಕೆ ಪಡೆದರು.

ಹಕ್ಕೊತ್ತಾಯಗಳು

-ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಕೂಡಲೇ ಸರ್ವೆ ನಡೆಸಿ, ಪ್ರತಿ ಎಕರೆಗೆ 25ಸಾವಿರ ರೂ.ಪರಿಹಾರ ನೀಡಬೇಕು.

 -ಕಲ್ಯಾಣ ಕರ್ನಾಟಕ ಭಾಗದ ಅತಿವೃಷ್ಟಿ ಹಾನಿಯನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಬೇಕು.

-ರಾಜ್ಯ ಸರಕಾರ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ನಡುವೆ ತಾರತಮ್ಯ ನೀತಿ ಅನುಸರಿಸುವುದನ್ನು ಬಿಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News