ಶಿವಮೊಗ್ಗ : ಸರ ಕಳವು ಪ್ರಕರಣ ; ನಾಲ್ವರು ಆರೋಪಿಗಳು ಸೆರೆ
ಶಿವಮೊಗ್ಗ : ಮಹಿಳೆಯೋರ್ವರ ಚಿನ್ನಾಭರಣ ಕಸಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಕೃಷ್ಣಪ್ಪ ಬಾಲಕೃಷ್ಣಪ್ಪ (60) , ನೇರಪ್ಪ (42), ವೀರೇಶ (29), ಪಂಚಪ್ಪ (48) ಬಂಧಿತ ಆರೋಪಿಗಳು.
ಶಿಕಾರಿಪುರ ಉಪ-ವಿಭಾಗದ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ತೊಗರ್ಸಿ ಗ್ರಾಮ ನಿವಾಸಿ ಬಸಮ್ಮ ಎಂಬವರು ಅ. 22 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವಾಪಾಸ್ ಬರುತ್ತಿರುವಾಗ ಇಬ್ಬರು ಆಸ್ಪತ್ರೆಯ ಮುಂಭಾಗ ನಕಲಿ ಬಂಗಾರದ ಸರವನ್ನು ತೋರಿಸಿ ಆ ನಕಲಿ ಬಂಗಾರದ ಸರವನ್ನು ಕೊಟ್ಟು ನಂತರ 3,500 ರೂ. ನಗದು ಹಾಗೂ ಒಂದು ಜೊತೆ ಬಂಗಾರದ ಬೆಂಡೋಲೆಯನ್ನು ಕಿತ್ತು ಪರಾರಿಯಾಗಿದ್ದರು ಎಂದು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಅರೋಪಿಗಳಿಂದ ಸುಲಿಗೆ ಮಾಡಿದ್ದ ಶಿರಾಳಕೊಪ್ಪ ಠಾಣೆ ಮತ್ತು ಶಿಕಾರಿಪುರ ಪಟ್ಟಣ ಠಾಣೆಯ ಒಟ್ಟು 2 ಪ್ರಕರಣಗಳಲ್ಲಿ ಒಟ್ಟು 2.64 ಲಕ್ಷ ರೂ. ಮೌಲ್ಯದ ಒಟ್ಟು 67 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿರುವ ಮೂರು ದ್ವಿಚಕ್ರ ವಾಹನಗಳ ಅಂದಾಜು ಮೊತ್ತ 1,20,000 ರೂ. ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಎಸ್ಪಿ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.